ಜೇವರ್ಗಿ ಪುರಸಭೆ ಸಿಬ್ಬಂದಿ ಮೇಲೆ ಹಲ್ಲೆ ಆರೋಪ ; ನ್ಯಾಯ ಒದಗಿಸಲು ಆಗ್ರಹ

ಕಲಬುರಗಿ : ಜೇವರ್ಗಿ ಪುರಸಭೆ ನೈರ್ಮಲ್ಯ ನಿರೀಕ್ಷಕ ರಾಜಶೇಖರ ಹಿರೇಮಠ ಮೇಲೆ ಹಲ್ಲೆ ನಡೆಸಿದ ಮಹೇಶ ರಾಠೋಡ್ ಹಾಗೂ ಇನ್ನಿತರ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಮೂಲಕ ನ್ಯಾಯ ಒದಗಿಸಿಕೊಡಬೇಕು ಎಂದು ಕಲಬುರಗಿ ಮಹಾನಗರ ಪಾಲಿಕೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ಕಟ್ಟಿಮನಿ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಪಿತಸ್ಥರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದುವರೆಗೂ ಯಾರೊಬ್ಬರನ್ನು ಬಂಧಿಸದೆ ಇರುವುದು ಖಂಡನೀಯ. ಕರ್ತವ್ಯನಿರತ ಸರಕಾರಿ ಅಧಿಕಾರಿಗೆ ಹಲ್ಲೆ ಮಾಡಿದ ವ್ಯಕ್ತಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಂಡು ಇನ್ನು ಮುಂದೆ ಯಾವುದೇ ರೀತಿಯ ಇಂಥಹ ಘಟನೆ ಆಗದಂತೆ ಜಿಲ್ಲಾ ಆಡಳಿತ ಹಾಗೂ ಸರಕಾರವು ಕ್ರಮ ಕೈಗೊಳ್ಳಬೇಕು ಎಂದರು.
ಜೇವರ್ಗಿ ಪುರಸಭೆಯ ಅಧಿಕಾರಿಗಳು ಹೋರಾಟಕ್ಕೆ ಕಲಬುರಗಿ ಮಹಾನಗರ ಪಾಲಿಕೆ ನೌಕರರ ಸಂಘದ ಬೆಂಬಲವಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುನೀಲ ವಂಟಿ, ಶ್ರೀಶೈಲ್, ಬಾಲಾಜಿ ಇದ್ದರು.
Next Story