ಪರಿಸರ ಸಂರಕ್ಷಿಸುವುದು ನಮ್ಮ ಕರ್ತವ್ಯ: ಬಸವರಾಜ್ ಜಂದೆ

ಕಲಬುರಗಿ: ನಮ್ಮ ಸುತ್ತಮುತ್ತಲಿನ ಪರಿಸರ ನಮಗೆ ಗಾಳಿ, ನೀರು ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ನೀಡುತ್ತದೆ, ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪೊಲೀಸ್ ಅಧಿಕಾರಿ ಬಸವರಾಜ್ ಜಂದೆ ಹೇಳಿದರು.
ಆಳಂದ್ ತಾಲ್ಲೂಕಿನ ಯಳಸಂಗಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಇಕೋ ಕ್ಲಬ್ 2024-25ರ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಅಭಿಯಾನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ನಾವು ಸೇವಿಸುವ ಗಾಳಿ ಪರಿಸರದಿಂದ ಬರುತ್ತದೆ. ಉತ್ತಮ ಪರಿಸರ ನಿರ್ಮಾಣ ಮಾಡಿದರೆ ನಮಗೆ ಒಳ್ಳೆಯ ಗಾಳಿ ಸಿಗುತ್ತದೆ, ಇದರಿಂದಲೇ ನಾವು ಜೀವಂತವಾಗಿದ್ದೇವೆ, ಪರಿಸರವನ್ನು ರಕ್ಷಿಸುವುದು ಎಲ್ಲರ ಹೊಣೆಯಾಗಿದೆ ಎಂದ ಅವರು, ಪ್ರಾಥಮಿಕ ಹಂತದಲ್ಲೇ ಚೆನ್ನಾಗಿ ಓದಿ, ಸರಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ದತ್ತಪ್ಪಾ ಸುಳ್ಳನ್ ಅವರು ಮಾತನಾಡಿ, ದೇಶ ಅಭಿವೃದ್ಧಿ ಹೊಂದಲು ಪರಿಸರ ಸಂರಕ್ಷಣೆ ಬಹಳಷ್ಟು ಅಗತ್ಯವಾಗಿದೆ. ವರದಿಯೊಂದರ ಪ್ರಕಾರ ದೇಶದಲ್ಲಿ ಶೇ.23 ರಷ್ಟು ಅರಣ್ಯ ಇರಬೇಕು, ಅಂದಾಗ ಮಾತ್ರ, ದೇಶ ಪ್ರಗತಿಯತ್ತ ಸಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ನಂತರ ಅತಿಥಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿಕೊಂಡು ಗಿಡ ನೆಡುವ ಮೂಲಕ ಪರಿಸರ ಕುರಿತಾಗಿ ಜಾಗೃತಿ ಮೂಡಿಸಿದರು.
ಅಲ್ಲದೆ, ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಅಭಿಯಾನದ ಕಾರ್ಯಕ್ರಮ ಸಮಾಪ್ತಿ ಬಳಿಕ ಶಿಕ್ಷಕರು, ವಿದ್ಯಾರ್ಥಿಗಳು ಕೂಡಿಕೊಂಡು ಗ್ರಾಮದ ಹೊರವಲಯದ 'ಸಿದ್ಧಗಿರಿ'ಯಲ್ಲಿ ವನಾಭೋಜನ ಸವಿಯುವ ಮೂಲಕ ಪರಿಸರ ಕುರಿತಾಗಿ ವಿಶೇಷವಾಗಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಹಾರೂನ್ ಪಟೇಲ್, ಮಹಿಬೂಬ್ ನದಾಫ್, ಸಿದ್ದಾರೂಢ ಐರೋಡಗಿ, ಅಶ್ವಿನಿ ಮ್ಯಾಕೆರಿ, ಶೋಭಾ ಬುಳ್ಳಾ, ಯಲ್ಲವ್ವ ಢಾಕನ್, ರೇಷ್ಮಾ ಯಲ್ದೆ, ಕವಿತಾ ಬುಳ್ಳಾ ಸೇರಿದಂತೆ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಜಾವೇದ್ ಪಟೇಲ್ ನಿರೂಪಿಸಿದರೆ, ರವಿಕಾಂತ್ ಹೊನಗುಂಡಿ ವಂದಿಸಿದರು.