ದೈಹಿಕ, ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡಾಕೂಟ ಸಹಕಾರಿ : ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್
ಆರ್.ಡಿ.ಪಿ.ಆರ್. ಕ್ರೀಡಾಕೂಟಕ್ಕೆ ಚಾಲನೆ

ಕಲಬುರಗಿ: ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು.
ಗುರುವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮತ್ತು ಆರ್.ಡಿ.ಪಿ.ಆರ್. ಅಧಿಕಾರಿ ಮತ್ತು ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕ್ರೀಡಾಕೂಟವನ್ನು ಆಕಾಶದಲ್ಲಿ ಬಲೂನ್ ಹಾರಿಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆರ್.ಡಿ.ಪಿ.ಆರ್ ಅಧಿಕಾರಿ ಸಿಬ್ಬಂದಿಗಳು ಚುನಾಯಿತ ಜನಪ್ರತಿನಿಧಿಗಳ ನಡುವೆ ಪ್ರತಿದಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಹೊರ ಬರಲು ಈ ಕ್ರೀಡಾಕೂಟ ಅನುಕೂಲವಾಗಲಿದೆ ಎಂದ ಅವರು, ಎಲ್ಲಾ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಮಾತನಾಡಿ, ಕ್ರೀಡಾಕೂಟವು ಆರೋಗ್ಯ, ಸಂತೋಷ ಜೊತೆಗೆ ಸಕಾರತ್ಮಕ ತಂಡ ಕಟ್ಟುವಲ್ಲಿ ನೆರವಾಗಲಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಂಘಿಕ ರೂಪದ ತಂಡ ತೋರಿಸಲಿದೆ. ಪ್ರತಿ ನಿತ್ಯ ಒಂದು ಗಂಟೆ ಬೆಳಗಿನ ಸಮಯ ವ್ಯಾಯಾಮಕ್ಕೆ ಮೀಸಲಿಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಕಬ್ಬಡ್ಡಿ, ಖೋಖೋ, ವಾಲಿಬಾಲ್, ಥ್ರೋಬಾಲ್, ಚೆಸ್, ಬ್ಯಾಡ್ಮಿಂಟನ್, ಲಾಂಗ್ ಜಂಪ್, ಶಾಟಪುಟ್, ಡಿಸ್ಕಸ್ ಥ್ರೋ, ಜಾವಲಿನ್ ಥ್ರೋ, ರನ್ನಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳು ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಮತ್ತು ಕ್ರಿಕೆಟ್ ಪಂದ್ಯಗಳು ಗುಲಬರ್ಗಾ ವಿ.ವಿ. ಕ್ರೀಡಾಂಗಣದಲ್ಲಿ ನಡೆಯಲಿದ್ದು, ಜಿಲ್ಲೆಯ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪಂಚಾಯತ್ ರಾಜ್ ಇಂಜಿನೀಯರಿಂಗ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಕೆ.ಆರ್.ಐ.ಡಿ.ಎಲ್ ಇಲಾಖೆ ಒಳಗೊಂಡ 14 ತಂಡಗಳ ಸುಮಾರು 1,000 ಅಧಿಕಾರಿ-ನೌಕರರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಪಿ.ಓ. ಎಸ್.ಎಸ್.ಮಠಪತಿ, ಸಿ.ಎ.ಓ ವಿಕಾಸ ಸಜ್ಜನ್, ಕೆ.ಆರ್.ಐ.ಡಿ.ಎಲ್. ಕಾರ್ಯನಿರ್ವಾಹಕ ಅಭಿಯಂತರರಾದ ರಾಹುಲ ಮತ್ತು ಸೌರಭ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇ.ಇ. ಧನರಾಜ ಲಡ್ಡೆ, ಪಿ.ಆರ್.ಇ.ಡಿ. ಇಇ ಮಲ್ಲಿಕಾರ್ಜುನ ಅಲ್ಲಿಪುರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ತಾಲೂಕಾ ಪಂಚಾಯತ್ ಇ.ಓ.ಗಳು ಸೇರಿದಂತೆ ವಿವಿಧ ವೃಂದದ ಅಧಿಕಾರಿ-ನೌಕರರು ಇದ್ದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ ಅವರು ಸ್ವಾಗತಿಸಿದರು. ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ ವಂದಿಸಿದರು. ಆಳಂದ ತಾಲೂಕು ಪಂಚಾಯತ್ ಇ.ಓ ಮಾನಪ್ಪ ಕಟ್ಟಿಮನಿ ಅವರು ಕ್ರೀಡಾ ಪ್ರತಿಜ್ಞೆ ಬೋಧಿಸಿದರು.