ಆಂದೋಲಾ ಶ್ರೀ, ಬಿಜೆಪಿ ಮುಖಂಡರ ಹತ್ಯೆಗೆ ಸಂಚು: 6 ಮಂದಿ ವಿರುದ್ಧ ಬಿಜೆಪಿ ದೂರು
ಕಲಬುರಗಿ : ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಮೂವರು ಬಿಜೆಪಿ ನಾಯಕರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಬೀದರ್ ಗುತ್ತಿಗೆದಾರ ತನ್ನ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವ ದುಷ್ಕರ್ಮಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಜಿಲ್ಲೆಯ ಬಿಜೆಪಿ ಮುಖಂಡರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಗುತ್ತಿಗೆದಾರ ಸಚಿನ ಪಾಂಚಾಳ ಆತ್ಮಹತ್ಯೆಗೆ ಮುನ್ನ ತನ್ನ ಡೆತ್ ನೋಟ್ ನಲ್ಲಿ ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಮಣಿಕಂಠ ರಾಠೋಡ್ ಮತ್ತು ಬಿಜೆಪಿಯ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾರೆಂದು ಉಲ್ಲೇಖಿಸಿದ್ದರು.
ಈ ಮೇರೆಗೆ ಹತ್ಯೆಗೆ ಸಂಚು ರೂಪಿಸಿದ್ದ ಕಾಂಗ್ರೆಸ್ ಮುಖಂಡ ರಾಜು ಕಪನೂರ್, ನಂದಕುಮಾರ್ ನಾಗಭುಜಂಗೆ, ಪ್ರತಾಪ್ ಧೀರ ಪಾಟೀಲ್, ಮನೋಜ್ ಶೇಜೇವಾಲ, ಗೋರಖನಾಥ್ ಸಜ್ಜನ್, ರಾಮನಗೌಡ ಪಾಟೀಲ್ ಸೇರಿದಂತೆ ಇತರರನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಕೊಲೆಗೆ ಸಂಚು ರೂಪಿಸಿದ್ದರಿಂದ ಆಂದೋಲಾ ಶ್ರೀಗಳಿಗೆ ಮತ್ತು ಬಿಜೆಪಿ ಮುಖಂಡರಿಗೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸೇಡಂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಶಾಸಕ ಬಸವರಾಜ ಮತ್ತಿಮಡು, ಚಂದು ಪಾಟೀಲ್, ನಿತಿನ್ ಗುತ್ತೇದಾರ್, ಅಮರನಾಥ್ ಪಾಟೀಲ್, ಶಿವರಾಜ್ ಪಾಟೀಲ್ ರದ್ದೇವಾಡಗಿ, ಶಿವಾನಂದ್ ಪಿಸ್ತಿ, ವಿಶಾಲ ದರ್ಗಿ, ಸಂಗಮೇಶ್ ಪಾಟೀಲ್ ಸೇರಿದಂತೆ ಇತರರು ಇದ್ದರು