ಪೇಜಾವರಶ್ರೀಯ ಸಂವಿಧಾನ ಬದಲಾವಣೆ ಹೇಳಿಕೆಯನ್ನು ಬಿಜೆಪಿ ಸಮರ್ಥಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಕಲಬುರಗಿ: ಪೇಜಾವರಶ್ರೀ ಸಂವಿಧಾನ ಬದಲಾಯಿಸಬೇಕೆಂಬ ಹೇಳಿಕೆ ನೀಡಿದರೂ ಬಿಜೆಪಿಗರು ತುಟಿಕ್ ಪಿಟಿಕ್ ಎನ್ನುತ್ತಿಲ್ಲ, ಇದರ ಬಗ್ಗೆ ಮೌನವಾಗಿರುವ ಬಿಜೆಪಿಗರು ಮನುಸ್ಮೃತಿಯ ಸಮರ್ಥನೆ ಎಂಬ ಅರ್ಥ ಬರುತ್ತದೆಯಲ್ಲವೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಕಾರ್ಯಗಳಿಂದ ಸಮಾಜಕ್ಕೆ ಮಾದರಿಯಾಗಬೇಕಾದವರು ವಿವಾದಾತ್ಮಕ ಹೇಳಿಕೆ ನೀಡಿ, ಜಾತಿ- ಮತಗಳ ಮಧ್ಯೆ ಬೆಂಕಿ ಹಚ್ಚಿಕೊಂಡು ತಿರುಗಾಡುತ್ತಿದ್ದಾರೆ. ಕಾನೂನು ವಿರೋಧವಾಗಿ ಮಾತನಾಡುವವರ ವಿರುದ್ಧ ಸರಕಾರ ಸುಮ್ಮನೆ ಕೂರಬೇಕಾ? ಸಂವಿಧಾನ ವಿರೋಧಿ ಹೇಳಿಕೆ ನೀಡುವ ಸ್ವಾಮಿಗಳನ್ನು ಸಮರ್ಥನೆ ಮಾಡಿಕೊಳ್ಳುವ ಬಿಜೆಪಿಗರಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿಯಲ್ಲಿ ಹುಚ್ಚರ ಸಂತೆ ನಡೆಯುತ್ತಿದೆ
ದಿನ ಬೆಳಗಾದರೆ ಬಿಜೆಪಿಯ ನಾಯಕರು ಒಬ್ಬರಿಗೊಬ್ಬರು ಬೈದಾಡಿಕೊಂಡು ಸುತ್ತುತ್ತಿದ್ದಾರೆ, ಹಾಗಾಗಿ ಬಿಜೆಪಿಯಲ್ಲಿ ಹುಚ್ಚರ ಸಂತೆ ಪ್ರಾರಂಭವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಟೀಕಿಸಿದ್ದಾರೆ.
ದಿನನಿತ್ಯವೂ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಮಾತಾಡಿದ್ದರೆ, ಈಗೀಗ ಯತ್ನಾಳ್ ವಿರುದ್ಧ ವಿಜಯೇಂದ್ರ, ರವಿಕುಮಾರ್, ಆರ್.ಅಶೋಕ್, ಬಿ.ಸಿ.ಪಾಟೀಲ್, ಸದಾನಂದ ಗೌಡ, ಮುನಿರತ್ನ, ರೇಣುಕಾಚಾರ್ಯ ಸೇರಿದಂತೆ ಹಲವರು ನಾಯಕರು ಬೈದಾಡಿಕೊಂಡು ಓಡಾಡುತ್ತಿದ್ದಾರೆ, ಬೇರೆಯವರ ಬಗ್ಗೆ ಮಾತನಾಡುವ ಬಿಜೆಪಿಗರು ತಮ್ಮ ವಂಶವಾಹಿನಿ ಬಗ್ಗೆ ಡಿಎನ್ಎ ಟೆಸ್ಟ್ ಮಾಡಿಸಲಿ, ಬೇಕಾದ್ರೆ ನಾನೇ ಉಚಿತವಾಗಿ ಪರೀಕ್ಷೆ ಮಾಡಿಸುತ್ತೇನೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಗರಿಗೆ ತಮ್ಮ ಇತಿಹಾಸ ತಮಗೆ ಗೊತ್ತಿಲ್ಲ, ಇವರು ಇದೀಗ ರಜಾಕಾರರ ಇತಿಹಾಸ ಹೇಳಲು ಹೊರಟಿದ್ದಾರೆ, ರಾಜಕೀಯದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ರಜಾಕಾರರ ಇತಿಹಾಸ ಓದಲು ಶುರು ಹಚ್ಚಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.