ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಪತ್ರಿಕಾಗೋಷ್ಠಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ವಿರೋಧ
ನನ್ನ ಮೇಲೆ ಹಲ್ಲೆ ನಡೆದಿರುವುದು ನೂರಕ್ಕೆ ನೂರು ಸತ್ಯ ಎಂದ ರಾಠೋಡ್
ಕಲಬುರಗಿ: ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಪತ್ರಿಕಾಗೋಷ್ಠಿ ತಡೆಯಲು ಯತ್ನಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ.
ಶುಕ್ರವಾರ ನಗರದ ಪತ್ರಿಕಾ ಭವನಕ್ಕೆ ತನ್ನ ಮೇಲೆ ನಡೆದಿರುವ ಹೆಲ್ಲೆ ಮತ್ತು ವಿಧಾನ ಸಭೆ ಕಲಾಪದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗಳಿಗೆ ಸ್ಪಷ್ಟನೆ ನೀಡಲು ಅವರು ಸುದ್ದಿಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಠಿಗೆ ಆಗಮಿಸುವ ವೇಳೆ ಜಿಲ್ಲಾ ಪಂಚಾಯಿತ್ ಆವರಣದಲ್ಲಿ ಮಣಿಕಂಠ ರಾಠೋಡ್ ಕಾರು ಪ್ರವೇಶಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳು ಕೂಗುತ್ತಾ ಕಾರಿಗೆ ಅಡ್ಡಗಟ್ಟಲು ಯತ್ನಿಸಿದರು.
ಈ ವೇಳೆ ಪೊಲೀಸರು ಮಣಿಕಂಠ ರಾಠೋಡ್ ಅವರಿಗೆ ಭದ್ರತೆ ನೀಡಿ, ಸುದ್ದಿಗೋಷ್ಠಿಗೆ ತೆರಳಲು ಅನುವು ಮಾಡಿಕೊಟ್ಟರು.
ನನ್ನ ಮೇಲೆ ಹಲ್ಲೆ ನಡೆದಿರುವುದು ನೂರಕ್ಕೆ ನೂರು ಸತ್ಯ
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಮುದಾಯದ ಜನರು ಪ್ರತಿಭಟನೆ ಮಾಡಲು ಮುಂದಾದರೆ ಸೆಕ್ಷನ್ 144 ಜಾರಿ ಹಾಕುತ್ತಾರೆ. ಇದು ಯಾವ ನ್ಯಾಯ ಎಂದು ಕಿಡಿಕಾರಿದರು.
ನನ್ನ ಮೇಲಿನ ಹಲ್ಲೆ ನಡೆದಿರುವುದನ್ನು ತಿರುಚಿರುವ ಕುರಿತು ಸ್ಪಷ್ಠನೆ ನೀಡಲು ಸುದ್ದಿಗೋಷ್ಠಿ ನಡೆಸಲು ಮುಂದಾದಗ ನನ್ನನ್ನು ಬಂಧಿಸಿದರು. ನನ್ನ ಧ್ವನಿ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ನಡೆದಿದ್ದು ನೂರಕ್ಕೆ ನೂರು ಸತ್ಯ , ನನ್ನ ಮೇಲಿನ ಹಲ್ಲೆ ಕುರಿತು ಕೇಳಲಾಗುವ ಪ್ರಶ್ನಿಗಳಿಗೆ ತಪ್ಪಿಸಿಕೊಳ್ಳಲು ಅದನ್ನು ತಿರುಚಲಾಗಿದೆ ಎಂದು ಅವರು ಆರೋಪಿದರು.
ಪ್ರಿಯಾಂಕ್ ಖರ್ಗೆ ವಿರುದ್ಧ ರಾಜಕೀಯ ಲಾಭ ಪಡೆಯಲು ಅಪಘಾತವನ್ನು ಹಲ್ಲೆ ಎಂದು ಬಿಂಬಿಸಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್
ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದನ್ನೇ ನೆಪವಾಗಿಟ್ಟುಕೊಂಡು ʼಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಹಲ್ಲೆ ನಡೆಸಿದ್ದಾರೆʼ ಎಂದು ಕಟ್ಟು ಕಥೆ ಕಟ್ಟಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದ ಸಂಗತಿ ಪೊಲೀಸರ ತನಿಖೆಯಿಂದ ಬಯಲಾಗಿತ್ತು.
ಹಲ್ಲೆ ಪ್ರಕರಣ ಸಂಬಂಧ ಮಣಿಕಂಠ ರಾಠೋಡ್ ಬೆಂಬಲಿಗನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಮಣಿಕಂಠನ ಅಸಲಿಯತ್ತು ಬಯಲಾಗಿದೆ. ಈ ಕಾರು ಅಪಘಾತವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮಣಿಕಂಠ ರಾಠೋಡ್, ನವೆಂಬರ್ 18 ರಂದು ಮಧ್ಯರಾತ್ರಿ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದ. ಅದಲ್ಲದೇ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿ, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ ಮಣಿಕಂಠ ರಾಠೋಡ್ ಅಸಲಿಯತ್ತು ಬಯಲಾಗಿದೆ. ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಯತ್ನ ಅಲ್ಲ, ಅಪಘಾತನ್ನೇ ಹಲ್ಲೆ ಎಂದು ಬಿಂಬಿಸಿದ್ದು ತನಿಖೆಯಿಂದ ತಿಳಿದುಬಂದಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಸಲು ಹೇಳಿದ್ದರು.
ಮಣಿಕಂಠ ರಾಠೋಡ್ ಅವರ ಕಾರು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಚಪೇಟ್ಲಾ ಗ್ರಾಮದ ಸಮೀಪ ಅಪಘಾತ ಆಗಿತ್ತು. ಅಲ್ಲಿಂದ ಮತ್ತೊಂದು ಕಾರಿನಲ್ಲಿ ಕುಳಿತು ಕಲಬುರಗಿಗೆ ಬರುವಾಗ ಮಾರ್ಗ ಮಧ್ಯದಲ್ಲಿ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಬಿಂಬಿಸಿದ್ದಾರೆ. ಇದನ್ನು ಕೆಲ ಪ್ರತ್ಯಕ್ಷದರ್ಶಿ ಸಾಕ್ಷಿಗಳು ತನಿಖೆ ವೇಳೆ ತಿಳಿಸಿದ್ದಾರೆ. ಈ ಸಂಬಂಧ ಕೆಲವು ಸಾಕ್ಷ್ಯಗಳನ್ನು ಕಲೆಹಾಕಲಾಗಿದೆ ಎಂದು ಅವರು ತಿಳಿಸಿದ್ದರು.