ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಿದ್ದಕ್ಕೆ ಬಿಜೆಪಿಯಿಂದ ಪ್ರಿಯಾಂಕ್ ಖರ್ಗೆ ಟಾರ್ಗೆಟ್ : ಕಾಂಗ್ರೆಸ್
'ಡೆತ್ ನೋಟ್ ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರೇ ಇಲ್ಲ'
ಕಲಬುರಗಿ : ಬೀದರ್ ನ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನು ಬರೆದಿರುವ ಎನ್ನಲಾದ ಡೆತ್ ನೋಟ್ ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರಿಲ್ಲ, ಉದ್ದೇಶಪೂರ್ವಕವಾಗಿ ಅವರ ಹೆಸರು ತಂದು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮತ್ತು ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ಜಿಲ್ಲೆಯಲ್ಲಿ ಬಿಜೆಪಿ ನಾಯಕರು ನಡೆಸುತ್ತಿರುವ ಮರಳು ದಂಧೆ, ಬೆಟ್ಟಿಂಗ್ ದಂಧೆ, ಗಾಂಜಾ ಸಾಗಾಟ ಸೇರಿದಂತೆ ಹಲವು ಅನೈತಿಕ ಚಟುವಟಿಕೆಗಳನ್ನು ಬಂದ್ ಮಾಡಿಸಿರುವುದರಿಂದ ಬಿಜೆಪಿಯವರು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ, ಹಾಗಾಗಿ ಪ್ರತಿಯೊಂದು ವಿಷಯಕ್ಕೆ ಅವರ ಹೆಸರನ್ನು ಎಳೆದು ತರುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿರುವಂತಹ ಹಲವು ಹಗರಣಗಳನ್ನು ಬಯಲಿಗೆ ಎಳೆಯುವಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಯಶಸ್ವಿಯಾಗಿದ್ದರು. ಅಲ್ಲದೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರುವಲ್ಲಿ ಅವರೂ ಸಹ ಕಾರಣರಾಗಿದ್ದಾರೆ, ಹಾಗಾಗಿ ಅವರನ್ನೇ ಟಾರ್ಗೆಟ್ ಮಾಡ್ತಿದ್ದಾರೆ, ಜೊತೆಗೆ ಇದನ್ನೇ ಬಿಜೆಪಿಗರು ಅಜೆಂಡವಾಗಿ ಮಾಡುತ್ತಿದ್ದಾರೆ ಎಂದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡೋ ಮಾತೇ ಇಲ್ಲ :
ಸಚಿನ್ ಪಾಂಚಾಳ ಬರೆದಿದ್ದ ಎನ್ನಲಾಗಿರುವ ಡೆತ್ ನೋಟ್ ನಲ್ಲಿ ತನ್ನ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಕಾರಣ ಎಂದು ಬರೆದಿಲ್ಲ, ಅಲ್ಲದೆ ಈ ಪ್ರಕರಣದಲ್ಲಿ ಅವರದು ಯಾವುದೇ ಕೈವಾಡವಿಲ್ಲ. ಹಾಗಾಗಿ ಸಚಿವ ಖರ್ಗೆ ಅವರೇ 'ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ಮಾಡಬೇಕೆಂದು' ಖುದ್ದಾಗಿ ಹೇಳಿದ್ದಾರೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧವೇ ಇಲ್ಲದ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಡುವ ಮಾತೇ ಇಲ್ಲ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ತಿಳಿಸಿದರು.
ಅಫಜಲ್ ಪುರ ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಆಡಳಿತದಲ್ಲಿ ಕುಸಿತ ಕಾಣುತ್ತಿದೆ, ಅಲ್ಲದೆ ರಾಜ್ಯದಲ್ಲಿ ಬಿಜೆಪಿ ಕ್ರಮೇಣ ನೆಲಕಚ್ಚಿದೆ ಹಾಗಾಗಿ ಇಲ್ಲಸಲ್ಲದ ನೆಪಗಳನ್ನು ಜನರ ಮುಂದೆ ಇಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ವಿಪಕ್ಷವಾಗಿ ಕೆಲಸ ಮಾಡಬೇಕು, ಸುಖಾ ಸುಮ್ಮನೆ ಸುಳ್ಳು ಆಪಾದನೆಗಳನ್ನು ಮಾಡಿ ಅಧಿಕಾರಕ್ಕೆ ಏರಲು ಹಂಬಲಿಸುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಪ್ರತಿಯೊಂದಕ್ಕೂ ಸಚಿವ ಖರ್ಗೆ ಅವರನ್ನೇ ಟಾರ್ಗೆಟ್ ಮಾಡುತ್ತಿರುವುದು ಸರಿಯಲ್ಲ, ಸುಳ್ಳು ಆರೋಪಗಳು ನೀಡುವುದರಿಂದ ಅವರು ರಾಜೀನಾಮೆ ಕೊಡುವ ಮಾತೇ ಇಲ್ಲ, ಈ ಹಿಂದೆ ಕಾಂಗ್ರೆಸ್ ನಲ್ಲೇ ಬೆಳೆದ ಚಲವಾದಿ ನಾರಾಯಣಸ್ವಾಮಿ ಈಗ ನಮ್ಮ ವಿರುದ್ಧವೇ ಮಾತನಾಡುತ್ತಿದ್ದಾರೆ, ಆತನಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಮುಖ ಹುದ್ದೆ ಕೊಟ್ಟಿರೋದನ್ನು ಮರೆತಿದ್ದಾನೆ ಎಂದು ನಾರಾಯಣಸ್ವಾಮಿ ವಿರುದ್ಧ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ರಾಜಗೋಪಾಲ ರೆಡ್ಡಿ, ಡಾ.ಕಿರಣ್ ದೇಶಮುಖ್, ಈರಣ್ಣ ಝಳಕಿ, ಶಿವಕುಮಾರ್ ಹೊನಗುಂಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.