ವಚನ ಸಾಹಿತ್ಯ ನಾಶ ಮಾಡಲು ವೈದಿಕಶಾಹಿಗಳ ಹುನ್ನಾರ : ಬಿ.ಆರ್.ಪಾಟೀಲ್
12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶಕ್ಕೆ ತೆರೆ
ಕಲಬುರಗಿ: ವಚನ ಸಾಹಿತ್ಯವನ್ನು ವೈದಿಕಶಾಹಿಗಳಿಂದ ಸಂಪೂರ್ಣವಾಗಿ ನಾಶ ಮಾಡುವ ಹುನ್ನಾರ ನಡೆದಿದ್ದು, ಅದ್ದರಿಂದ ನಾವು ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ರಾಜ್ಯ ಕದಳಿ ಮಹಿಳಾ ವೇದಿಕೆ ವತಿಯಿಂದ ರವಿವಾರ ನಡೆದ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಜಾತಿ ಜನಗಣತಿ ಬಗ್ಗೆ ರಾಜ್ಯದಲ್ಲಿ ವಿವಾದ ಹುಟ್ಟಿದೆ. ಇದರಲ್ಲಿ ನಾವು ಮತ್ತು ಸರಕಾರ ತಪ್ಪು ಮಾಡಿದ್ದೇವೆ. ಲೋಹಿಯಾವಾದಿಯಾಗಿ ಜಾತಿ ಗಣತಿ ಆಗಲೇಬೇಕು. ಅದನ್ನು ಸ್ವಾಗತಿಸಬೇಕು. ನಂತರದಲ್ಲಿ ಚರ್ಚೆ ನಡೆಯಲಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಡಾ.ಎಂ.ಎಂ.ಕಲ್ಬುರ್ಗಿ ಹಾಗೂ ಗೌರಿ ಲಂಕೇಶ ಹತ್ಯೆ ಮಾಡಿದವರನ್ನು ಸನ್ಮಾನಿಸುವ ಚಾಳಿ ಮುಂದುವರಿದಿರುವುದು ದುರಂತದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಬಸವ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ ಅಕ್ಕಮಹಾದೇವಿ ಜಗತ್ತಿನ ಮೊಟ್ಟ ಮೊದಲ ಬಂಡಾಯಗಾರ್ತಿಯಾಗಿದ್ದು, ಶರಣರ ವಚನಗಳು ಬದುಕಿಗೆ ಸ್ಪೂರ್ತಿ ನೀಡುತ್ತವೆ ಎಂದು ತಿಳಿಸಿದರು.
ಡಾ. ಮೀನಾಕ್ಷಿ ಬಾಳಿ ಮಾತನಾಡಿ, ವಚನ ದರ್ಶನ ಕೃತಿ ಬಿಡುಗಡೆ ಹಾಗೂ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದವರನ್ನು ಸನ್ಮಾನಿಸಿರುವುದರ ಬಗ್ಗೆ, ಮಹಿಳೆಯರ ಮೇಲಿನ ಅತ್ಯಾಚಾರ, ಅನ್ಯಾಯವನ್ನು ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಖಂಡನಾ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚಿಂತಕ ಶಂಕರ ದೇವನೂರ ಮಾತನಾಡಿ, ಹುಟ್ಟುತ್ತ ಮಗುವಾಗಿ, ಬೆಳೆಯುತ್ತ ಸಾಧಕನಾಗಿ, ಕೊನೆಯಲ್ಲಿ ಬೆಳಕಾಗುವುದೇ ಜೀವನ. ಬದುಕು ಕೂಡ ಹೂವಿನಂತೆ ಮಾಡಿಕೊಳ್ಳುವುದೇ ಶರಣತತ್ವ ಎಂದರು.
ನಮ್ಮ ಮನಸ್ಸು ಜೀವಂತಿಕೆಯ ಸ್ವಭಾವ ಪಡೆಯಬೇಕಾದರೆ ನಾವು ಮತ್ತೆ ಹನ್ನೆರಡನೆ ಶತಮಾನಕ್ಕೆ ಧಾವಿಸುತ್ತದೆ. ಮಾನವಶಕ್ತಿಯ ಪೂರ್ಣ ವಿಕಾಸದ ಶಕ್ತಿಯನ್ನು ಶರಣರು ಕಲ್ಪಿಸಿದರು ಎಂದು ಹೇಳಿದರು.
ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಭಾಲ್ಕಿಯ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಉಪಾಧ್ಯಕ್ಷ ನಿತಿನ್ ವಿ. ಗುತ್ತೇದಾರ, ಪ್ರಕಾಶ ಅಂಗಡಿ, ಶಾಂತಲಿಂಗ ಪಾಟೀಲ ಕೋಳಕೂರ, ಕುಪೇಂದ್ರ ಪಾಟೀಲ, ಬಸವರಾಜ ಮೊರಬದ, ಡಾ. ಶಾಂತಾ ಅಸ್ಟಿಗೆ, ಎಚ್.ಬಿ. ಶೈಲಜಾ, ಜಯಶ್ರೀ ಚಟ್ನಳ್ಳಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಭಾರತಿ ರೇಷ್ಮೆ ಇತರರು ವೇದಿಕೆಯಲ್ಲಿದ್ದರು.
ಎರಡು ಪುಸ್ತಕಗಳ ಬಿಡುಗಡೆ:
ಇದೇ ವೇಳೆಯಲ್ಲಿ ಡಾ.ಮೀನಾಕ್ಷಿ ಬಾಳಿ ರಚಿಸಿದ 'ವಚನ ನಿಜದರ್ಶನ' ಕೃತಿಯನ್ನು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಶಾಸಕ ಬಿ.ಆರ್. ಪಾಟೀಲ ಲೋಕಾರ್ಪಣೆ ಮಾಡಿದರು. ಜಡದಲ್ಲಿ ಜಂಗಮ ಕೃತಿಯನ್ನು ಪರಿಷತ್ ಕೇಂದ್ರ ಅಧ್ಯಕ್ಷ ಡಾ. ಸಿ. ಸೋಮಶೇಖರ ಬಿಡುಗಡೆ ಮಾಡಿದರು.