ಕೇಂದ್ರ ಸರಕಾರ ಕಡಿಮೆ ಬರ ಪರಿಹಾರ ನೀಡಿದೆ : ಸಿಎಂ ಸಿದ್ದರಾಮಯ್ಯ
3,454 ಕೋಟಿ ರೂ. ಪರಿಹಾರ ಯಾವುದಕ್ಕೆ ಸಾಲುತ್ತದೆ ಎಂದು ಪ್ರಶ್ನಿಸಿದ ಸಿಎಂ
ಕಲಬುರಗಿ : ರಾಜ್ಯದ ಬರಪರಿಹಾರ ಸಂಬಂಧ ಕೇಂದ್ರದ ಬಳಿ 18,174 ಕೋಟಿ ರೂ. ನೀಡುವಂತೆ ಮನವಿ ಮಾಡಿಕೊಂಡಿದ್ದೆವು. ಆದರೆ, ನಾವು ಅವರ ಬಳಿ ಕೇಳಿದ್ದಕ್ಕಿಂತ 1/4 ಕ್ಕಿಂತಲೂ ಬರಪರಿಹಾರ ಕಡಿಮೆ ಇದೆ. 3,454 ಕೋಟಿ ರೂ. ಪರಿಹಾರ ಯಾವುದಕ್ಕೆ ಸಾಲುತ್ತದೆ? ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚಿಸಿ ನಮ್ಮ ನಿಲುವು ತಿಳಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕಲಬುರಗಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, “ದೇಶದಲ್ಲಿ ಮೊದಲ ಬಾರಿಗೆ ಬರಪರಿಹಾರ ಸಂಬಂಧ ಸುಪ್ರೀಂ ಕೋರ್ಟ್‌ನ ಕದ ತಟ್ಟಿದ್ದೇವೆ. ಸುಪ್ರೀಂ ಕೋರ್ಟ್ ತಿಳಿಸಿದ ಮೇಲೆ ಇಷ್ಟು ಕಡಿಮೆ ಬರಪರಿಹಾರ ಕೊಟ್ಟಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸುಪ್ರೀಂ ಕೋರ್ಟ್ ಮುಂದೆ ರಾಜ್ಯ ಸರ್ಕಾರಗಳು ಬರುವುದು ಸರಿಯಲ್ಲ ಎಂದು ಸುಪ್ರೀಂ ಕೇಂದ್ರಕ್ಕೆ ಹೇಳಿದೆ. ಕೂಡಲೇ ಸರಿಪಡಿಸಿಕೊಳ್ಳಿ ಎಂದಿದೆ. ಹೀಗಾಗಿ ನಾಳೆ ವಿಚಾರಣೆ ಇದೆ" ಎಂದರು.
ಮೋದಿ ಅವರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ
ಹಿಂದುಳಿದ ವರ್ಗ, ಮಹಿಳೆಯರಿಗೆ ಹಾಗೂ ಅಲ್ಪಸಂಖ್ಯಾತರ ಮಿಸಲಾತಿ ಕಾನೂನಾತ್ಮಕ ಎಂಬುದು ಗೊತ್ತಿದ್ದರೂ, ರಾಜಕೀಯವಾಗಿ ಹತಾಶೆರಾಗಿ ಮೋದಿ ಅವರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಈ ಧೋರಣೆಯನ್ನು ಖಂಡಿಸುತ್ತೇನೆ ಎಂದರು.
ಹಿಂದುಳಿದ ವರ್ಗಗಳ ಮಿಸಲಾತಿ ಮುಸ್ಲಿಮರಿಗೆ ಕೊಟ್ಟಿದ್ದಾರೆ ಎಂದು ಮೋದಿ ಹೇಳುತ್ತಿರುವುದು ಅತ್ಯಂತ ಸುಳ್ಳು. ಓಟುಗಳನ್ನು ಧ್ರುವೀಕರಣ ಮಾಡಲು ಸುಳ್ಳು ಹೇಳಿ ಪ್ರಧಾನಮಂತ್ರಿಗಳು ಸಂವಿಧಾನದ ಧ್ಯೇಯೋದ್ದೇಶಕ್ಕೆ ಧಕ್ಕೆ ತಂದಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್, ಬಿಆರ್ ಪಾಟೀಲ್, ಶಾಸಕ ಡಾ. ಅಜಯ್ ಸಿಂಗ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಗದೇವ್ ಗುತ್ತೇದಾರ ಇದ್ದರು.