ಮುಖ್ಯಮಂತ್ರಿಗಳಿಂದ ಕಲಬುರಗಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿ.ಇ.ಓಗೆ ಪ್ರಶಸ್ತಿ ವಿತರಣೆ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಉತ್ತಮ ಕಾರ್ಯನಿರ್ವಹಣೆ
ಕಲಬುರಗಿ: ಕಳೆದ ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಆಯೋಜಿಸಿದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮವನ್ನು ಅತ್ಯತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದ್ದಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರಮಾಣ ಪತ್ರ ಪ್ರದಾನ ಮಾಡಿದರು.
ಮಂಗಳವಾರ ಬೆಂಗಳೂರಿನ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಅತ್ಯಂತ ಉದ್ದದ ಮಾನವ ಸರಪಳಿ ಮತ್ತು ಅತಿ ಹೆಚ್ಚಾಗಿ ಖಾಸಗಿ ಕಂಪನಿಗಳ ಭಾಗವಹಿಸುವಿಕೆ ವಿಭಾಗದಲ್ಲಿ ಕಲಬುರಗಿ ಜಿಲ್ಲೆ ಮೂರನೇ ಸ್ಥಾನ ಪಡೆದಿರುವುದಕ್ಕೆ ಡಿ.ಸಿ. ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಅವರು ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಿ ಸಿ.ಎಂ. ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿದರು.
ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್, ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾ ಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಜಿಲ್ಲೆಗಳನ್ನು ಮಾನವ ಸರಪಳಿ ನಾವಿಣ್ಯತೆ, ಅತ್ಯಂತ ಉದ್ದದ ಮಾನವ ಸರಪಳಿ, ಅತಿ ಹೆಚ್ಚು ಗಿಡಗಳನ್ನು ನೆಡುವುದು, ಅತಿ ಹೆಚ್ಚು ಸ್ವಯಂ ಸೇವಾ ಸಂಘಗಳ ಭಾಗವಹಿಸುವಿಕೆ ಹಾಗೂ ಅತಿ ಹೆಚ್ಚಾಗಿ ಖಾಸಗಿ ಕಂಪನಿಗಳ ಭಾಗವಹಿಸುವಿಕೆ ಹೀಗೆ 5 ವಿಭಾಗಗಳಲ್ಲಿ ತಲಾ 3 ಪ್ರಶಸ್ತಿಗಳನ್ನು ನೀಡಲಾಗಿದ್ದು, ಇದರಲ್ಲಿ ಎರಡು ವಿಭಾಗದಲ್ಲಿ ಕಲಬುರಗಿ ಜಿಲ್ಲೆ ಮೂರನೇ ಸ್ಥಾನ ಪಡೆದಕೊಂಡಿದೆ.
ಭಾರತದ ಶ್ರೇಷ್ಠ ಸಂವಿಧಾನದ ಮೂಲ ಆಶಯ ವಿಶ್ವಕ್ಕೆ ಪರಿಚಯಿಸುವ ಮೂಲಕ ಗಮನ ಸೆಳೆದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮ ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಕಿಣ್ಣಿಸಡಕ್ ನಿಂದ ಚಿತ್ತಾಪೂರ ತಾಲೂಕಿನ ಅಲ್ಲಿಪುರ ತಾಂಡಾ ವರೆಗೆ ಏಕಕಾಲದಲ್ಲಿ ಜಿಲ್ಲೆಯ ಒಂದು ಲಕ್ಷ ಜನರಿಂದ 113 ಕಿ.ಮೀ. ಉದ್ದದ ಮಾನವ ಸರಪಳಿ ರಚಿಸಿದಲ್ಲದೆ ಸಂವಿಧಾನ ಪೀಠಿಕೆ ವಾಚನ ಮಾಡಲಾಗಿತ್ತು. ರಾಜ್ಯದಾದ್ಯಂತ ಬೀದರ ನಿಂದ ಚಾಮರಾಜನಗರ ವರೆಗೆ ಜರುಗಿದ 2,500 ಕಿ.ಮೀ. ಉದ್ದದ ಮಾನವ ಸರಪಳಿಯಲ್ಲಿ ಸುಮಾರು 25 ಲಕ್ಷ ಮಂದಿ ಕೈಕೈ ಹಿಡಿದು ವಿಶ್ವದ ಬೃಹತ್ ಮಾನವ ಸರಪಳಿಯಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮ ಒಂದು ವಿಶಿಷ್ಟ ದಾಖಲೆ ನಿರ್ಮಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಯಾಗಿ ಸೇರ್ಪಡೆಗೊಂಡಿದೆ.