ಮಾ.8 ರಂದು ಜೇವರ್ಗಿಯಲ್ಲಿ ಕಲ್ಯಾಣ ಪಥಕ್ಕೆ ಸಿಎಂ ಚಾಲನೆ : ಬಿ.ಫೌಝಿಯಾ ತರನ್ನುಮ್

ಕಲಬುರಗಿ : ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ 38 ವಿಧಾನಸಭಾ ಕ್ಷೇತ್ರದಲ್ಲಿ ಕೆ.ಕೆ.ಆರ್.ಡಿ.ಬಿ ಅನುದಾನದ ನೆರವಿನೊಂದಿಗೆ ಒಟ್ಟು 1,150 ಕೋಟಿ ರೂ. ಮೊತ್ತದಲ್ಲಿ ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣ ಮಾಡುವ "ಕಲ್ಯಾಣ ಪಥ" ಯೋಜನೆಗೆ ಮಾರ್ಚ್ 8 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೇವರ್ಗಿಯಲ್ಲಿ ಚಾಲನೆ ನೀಡಲಿದ್ದು, ಐತಿಹಾಸಿಕ ಕಾರ್ಯಕ್ರಮ ಯಶಸ್ಸಿಗೆ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಇದು ರಾಜ್ಯ ಮಟ್ಟದ ಕಾರ್ಯಕ್ರಮವಾಗಿರುವುದರಿಂದ ಮುಖ್ಯಮಂತ್ರಿಗಳ ಜೊತೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರದೇಶದ ಸಚಿವರು, ಶಾಸಕರು, ನಿಗಮ-ಮಂಡಳಿಗಳ ಅಧ್ಯಕ್ಷರು ಭಾಗಿಯಾಗುವುದರಿಂದ ಎಲ್ಲಾ ರೀತಿಯ ಅಗತ್ಯ ಪೂರ್ವಸಿದ್ಧತೆ ಜೊತೆಗೆ ಹೆಚ್ಚಿನ ಭದ್ರತೆ ವ್ಯವಸ್ಥೆ ಕಲ್ಪಿಸಬೇಕೆಂದರು.
ಕಾರ್ಯಕ್ರಮಕ್ಕೆ ಕೇವಲ 4 ನಾಲ್ಕು ದಿನ ಬಾಕಿ ಇದ್ದು, ಕೂಡಲೆ ಕಾರ್ಯಕ್ರಮ ನಡೆಯುವ ಸ್ಥಳವಾದ ಜೇವರ್ಗಿ ಹೊರವಲಯದ ತಾಯಿ-ಮಕ್ಕಳ ಅರೋಗ್ಯ ಆಸ್ಪತ್ರೆ ಆವರಣದ ಸ್ವಚ್ಛತೆ ತ್ವರಿತಗತಿಯಲ್ಲಿ ಮಾಡಿ ಶಾಮಿಯಾನ ಹಾಕಿಸಬೇಕು. ಸಾರ್ವಜನಿಕರಿಗೆ ಆಸನ, ಊಟ-ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜನಪ್ರತಿನಿಧಿಗಳು, ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಬೃಹತ್ ವೇದಿಕೆ ನಿರ್ಮಿಸಬೇಕು. ವಾಹನ ಪಾರ್ಕಿಂಗ್, ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದರು.
ಇನ್ನು ಕಾರ್ಯಕ್ರಮ ಯಶಸ್ಸಿಗೆ ವಸತಿ, ವೇದಿಕೆ, ಆಹಾರ, ಆರೋಗ್ಯ, ಕಾನೂನು ಸುವ್ಯವಸ್ಥೆ ಸೇರಿದಂತೆ ಒಟ್ಟಾರೆ 12 ಸಮಿತಿಗಳನ್ನು ರಚಿಸಿದ್ದು, ಸಮಿತಿಯಲ್ಲಿನ ಅಧಿಕಾರಿಗಳು ತಮಗೆ ನೀಡಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.
ಶಿಷ್ಠಚಾರ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿ:
ಕಾರ್ಯಕ್ರಮಕ್ಕೆ ಸಿ.ಎಂ., ಡಿ.ಸಿ.ಎಂ., ರಾಜ್ಯ ಸಭೆ ವಿಪಕ್ಷ ನಾಯಕರು ಸೇರಿದಂತೆ ಪ್ರದೇಶದ ಸಚಿವರು-ಶಾಸಕರು ಭಾಗವಹಿಸುವುದರಿಂದ ಗಣ್ಯರಿಗೆ ವಸತಿ, ಊಟೋಪಚಾರ, ಸಾರಿಗೆ, ಭದ್ರತೆ ಸೇರಿದಂತೆ ವೇದಿಕೆ ಮೇಲೆ ಶಿಷ್ಠಾಚಾರ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದ ಡಿಸಿ ಅವರು, ಕೂಡಲೆ ಕಾರ್ಯಕ್ರಮದ ಮಿನಿಟ್ ಟು ಮಿನಿಟ್ ವಿವರ ಸಲ್ಲಿಸುವಂತೆ ಪಿ.ಎಂ.ಜಿ.ಎಸ್.ವೈ ಕಾರ್ಯನಿರ್ವಾಹಕ ಅಭಿಯಂತ ವಿಜಯಕುಮಾರ ಅವರಿಗೆ ಡಿ.ಸಿ. ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ, ಸಹಾಯಕ ಆಯುಕ್ತೆ ಸಾಹಿತ್ಯ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಾ ಪಂಚಾಯತ್ ಇ.ಓ.ಗಳು ಭಾಗವಹಿಸಿದ್ದರು.