ಸತ್ಯಾಂಶ ಬಹಿರಂಗವಾಗಿದ್ದಕ್ಕೆ ಈ .ಡಿ ವಿರುದ್ಧ ಸಿಎಂ ಬೇಸರ: ವಿಜಯೇಂದ್ರ
ಬಿ.ವೈ.ವಿಜಯೇಂದ್ರ
ಕಲಬುರಗಿ: ಮುಡಾ ಹಗರಣ ಕುರಿತಾಗಿ ತನಿಖೆಯಿಂದ ಜಾರಿ ನಿರ್ದೇಶನಾಲಯ (ಇಡಿ) ಸತ್ಯಾಂಶ ಬಹಿರಂಗಪಡಿಸಿದ್ದರಿಂದ ಸಿಎಂ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಸರಕಾರ ಲೋಕಾಯುಕ್ತದಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ನಾವು ಆರೋಪಿಸುತ್ತಲೇ ಬಂದಿದ್ದೇವೆ. ಮೈಸೂರಿನ ಮುಡಾ ಅವ್ಯವಹಾರದಲ್ಲಿ ಫೋರ್ಜರಿ ನಡೆದಿದೆ ಮತ್ತು ಅಕ್ರಮ ಆಸ್ತಿ ಗಳಿಕೆ ನಡೆದಿದೆ ಎಂದು ಕಂಪ್ಲೇಂಟ್ ಕೊಟ್ಟಿದ್ದೇವೆ. ವೈಟ್ನರ್ ನಿಂದ ಮಾಡಿರುವ ತಿದ್ದುಪಡಿ ಸೇರಿದಂತೆ ಇತರ ಅಕ್ರಮವನ್ನು ಜಾರಿ ನಿರ್ದೇಶನಾಲಯ ಸಮಗ್ರ ತನಿಖೆಯ ನಂತರ ಸತ್ಯಾಂಶವನ್ನು ರಾಜ್ಯದ ಜನರ ಮುಂದಿಟ್ಟಿದೆ. ಹಾಗಾಗಿ ಸಂಸ್ಥೆ ವಿರುದ್ಧ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರ ವರ್ತನೆ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ನಾಲಗೆ ನಾವು ಹೇಗಿದ್ದೇವೆ ಎಂಬುದನ್ನು ತೋರಿಸುತ್ತದೆ, ಅದು ನನ್ನನ್ನು ಹಿಡಿದುಕೊಂಡು ಎಲ್ಲರಿಗೂ ಅನ್ವಯವಾಗುತ್ತದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಸಂಘಟನೆ ಎನ್ನುವುದು ಹಲವು ಕಾರ್ಯಕರ್ತರ ಬೆವರಿನಿಂದ ಬೆಳೆಸಿದ್ದಾಗಿರುತ್ತದೆ, ಅವರಿಗೆ ನೋವಾಗದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಮೂರು ಉಪ ಚುನಾವಣೆಯಲ್ಲಿ ಗೆದ್ದಿದ್ದಕ್ಕಾಗಿ ಮುಖ್ಯಮಂತ್ರಿ ಸ್ಥಾನ ತನ್ನಲ್ಲೇ ಉಳಿಸಿಕೊಳ್ಳಲು ಸಿದ್ದರಾಮಯ್ಯ ಜನ ಕಲ್ಯಾಣ ಸಮಾವೇಶ ಮಾಡುತ್ತಿದ್ದಾರೆ, ಅದು ಕೇವಲ ಅವರ ಶಕ್ತಿ ಪ್ರದರ್ಶನವಾಗಿದೆ ಹೊರತು ಮತ್ತೇನಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದ ನಿಯೋಜಿತ ಮುಖ್ಯಮಂತ್ರಿ ಫಡ್ನವೀಸ್ ಒಬ್ಬ ಮಹಾನ್ ಕಾರ್ಯಕರ್ತ. ಅವರು ಮಹಾರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರು ಜನಪ್ರಿಯ ನಾಯಕರಾಗಿದ್ದಾರೆ ಮತ್ತು ದೇವೇಂದ್ರ ಅವರಿಗೆ ಸಂತೋಷವಾಗಿದೆ. ಫಡ್ನವೀಸ್ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದರು.