ಗುಲ್ಬರ್ಗಾ ವಿವಿಯ ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ
13 ಚಿನ್ನದ ಪದಕಗಳನ್ನು ಗಳಿಸಿದ ವಿದ್ಯಾರ್ಥಿನಿ ಆನಂದಮ್ಮ
ರಾಜ್ಯಪಾಲರಿಂದ 13 ಚಿನ್ನದ ಪದಕಗಳನ್ನು ಸ್ವೀಕರಿಸುತ್ತಿರುವ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ಆನಂದಮ್ಮ.
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವ ಸೋಮವಾರ ಜ್ಞಾನಗಂಗಾ ಕ್ಯಾಂಪಸ್ ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜರುಗುತ್ತಿದೆ.
ಘಟಿಕೋತ್ಸವದಲ್ಲಿ ಕಾನೂನು ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿ ಗುರುತರ ಸೇವೆ ಪರಿಗಣಿಸಿ ಅರ್ಚನಾ ಪ್ರದೀಪ ತಿವಾರಿ, ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ನಿರಂತರ ಹೋರಾಟ ಮತ್ತು ಸಾಮಾಜಿಕ ಸೇವೆ ಸಲ್ಲಿಸಿದ ಹೋರಾಟಗಾರ ಬೀದರ ಮೂಲದ ಲಕ್ಷ್ಮಣ ದಸ್ತಿ, ಶಿಕ್ಷಣ, ಕೃಷಿ ಮತ್ತು ಕೃಷಿ ಉದ್ದಿಮೆಗಳ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಲಿಂಗರಾಜಪ್ಪ ಅಪ್ಪರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
74 ವಿದ್ಯಾರ್ಥಿಗಳಿಗೆ 168 ಚಿನ್ನದ ಪದಕ
ಈ ಬಾರಿ 52 ವಿದ್ಯಾರ್ಥಿನಿಯರು, 22 ವಿದ್ಯಾರ್ಥಿಗಳು ಸೇರಿ ಒಟ್ಟು 74 ವಿದ್ಯಾರ್ಥಿಗಳಿಗೆ 168 ಚಿನ್ನದ ಪದಕ, 9 ಜನರಿಗೆ ಚಿನ್ನದ ಪದಕ ಪರಿವರ್ತಿಸಿ ನಗದು ಬಹುಮಾನ ನೀಡಲಾಯಿತು.
ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ಆನಂದಮ್ಮ-13 ಚಿನ್ನದ ಪದಕ, ಪ್ರಾಣಿಶಾಸ್ತ್ರ ವಿಭಾಗದ ಪೂರ್ವಕ ಗದ್ವಾಲ- 7 ಚಿನ್ನದ ಪದಕ, ಎಂಬಿಎ ಅಧ್ಯಯನ ವಿಭಾಗದ ಅಭಿಷೇಕ-6 ಚಿನ್ನದ ಪದಕ, ಸಮಾಜ ಕಾರ್ಯ ವಿಭಾಗದ ಅಂಬಿಕಾ-6 ಚಿನ್ನದ ಪದಕ, ರಾಜ್ಯಶಾಸ್ತ್ರ ವಿಭಾಗದ ಪಲ್ಲವಿ-6 ಚಿನ್ನದ ಪದಕ, ಸಸ್ಯಶಾಸ್ತ್ರ ವಿಭಾಗದ ಅಫ್ರಿನ್ ಸುಲ್ತಾನಾ, ಜೀವರಸಾಯನ ಶಾಸ್ತ್ರ ವಿಭಾಗದ ವಿಷ್ಣುಕಾಂತ, ಎಂಸಿಎ ವಿಭಾಗದ ಮಲ್ಕಮ್ಮ, ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಭಾಗ್ಯಾ ಕ್ರಮವಾಗಿ 5 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಈ ಘಟಿಕೋತ್ಸವದಲ್ಲಿ ಒಟ್ಟು 29,307 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪಡೆಯಲಿದ್ದು, ಈ ಪೈಕಿ 15,869 ಪುರುಷ, 13,438 ಮಹಿಳೆಯರಿದ್ದಾರೆ. ವಿವಿಧ ನಿಕಾಯಗಳು ಸೇರಿ 113 ವಿದ್ಯಾರ್ಥಿಗಳಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಗುವುದು. ಕಲಾ ನಿಕಾಯ-38 ಪಿಎಚ್ ಡಿ, ಸಮಾಜ ವಿಜ್ಞಾನ ನಿಕಾಯ- 29 ಪಿಎಚ್ ಡಿ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ-26 ಪಿಎಚ್ ಡಿ, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯ- 11 ಪಿಎಚ್ ಡಿ, ಶಿಕ್ಷಣ ನಿಕಾಯ-9 ಪಿಎಚ್ ಡಿ ಪ್ರದಾನ ಮಾಡಲಾಗಿದೆ.