ಜಾತಿಗೊಂದು ಡಿಸಿಎಂ ವಿಚಾರ ಹೈಕಮಾಂಡ್ ಮುಂದೆ ಇಲ್ಲ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: ರಾಜ್ಯದಲ್ಲಿ ಮೂವರು ಡಿಸಿಎಂ ವಿಚಾರ ಹೈಕಮಾಂಡ್ ಮುಂದೆ ಇಲ್ಲ ಎಂದು ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಇಲ್ಲಿನ ವಿಮಾನನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತಮಾಡಿದ ಅವರು, ʼರಾಜ್ಯದ ಬೆಳವಣಿಗೆಗಳ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಅವರು ಉತ್ತರಿಸುತ್ತಾರೆ. ನಮ್ಮ ಮುಂದೆ ಇಂತಹ ಪ್ರಸ್ತಾವನೆ ಇಲ್ಲ, ಇದೆಲ್ಲಾ ಉಹಾಪೋಹ ಅಷ್ಟೆ ಎಂದರು.
ಚುನಾವಣೆ ಸಂದರ್ಭದಲ್ಲಿ ಇಂತಹ ವಿಚಾರ ಬರಬಾರದು. ಸದ್ಯಕ್ಕೆ ಸರಕಾರ ನಡೆಸುವ ಕಡೆಗೆ, ಸಮಸ್ಯೆಗಳ ಕಡೆಗೆ ಗಮನ ಕೊಡಬೇಕು. ನಮ್ಮ ಗ್ಯಾರೆಂಟಿಗಳನ್ನು ಅನುಷ್ಠಾನಕ್ಕೆ ತರುವ ಕಡೆಗೆ ಗಮನ ಕೊಡವ ಕೆಲಸ ಸಿದ್ದರಾಮಯ್ಯ, ಡಿಕೆ ಶಿವಕುಮಾರ, ಪರಮೇಶ್ವರ್ ಎಲ್ಲರೂ ಮಾಡುತ್ತಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ನಾಳೆ ಸಭೆ ನಡೆಯಲಿದ್ದು, ಸಭೆಯಲ್ಲಿ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಗಳನ್ನು ಹಾಕಬೇಕು ಎನ್ನುವುದರ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಇನ್ನು ದೇಶದಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಇಂಡಿಯಾ ಒಕ್ಕೂಟ ಒಂದಾಗಿ, ಒಗ್ಗಟ್ಟಾಗಿ ಹೋಗುವ ನಿರ್ಣಯ ಕೈಗೊಂಡಿದ್ದೇವೆ. ಅದೇ ರೀತಿ ಒಂದಾಗಿ ಕೆಲಸ ನಿರ್ವಹಿಸುತ್ತೇವೆ. ನಾಳೆ ದೆಹಲಿಯಲ್ಲಿ ಅನೇಕ ಘಟಕಗಳ ಮೀಟಿಂಗ್ ಕರೆದಿದ್ದೇವೆ ಎಂದು ಮಾಹಿತಿ ನೀಡಿದರು.
ಮಿತ್ರರಾಷ್ಟ್ರ ಮಾಲ್ಡೀವ್ಸ್ ವೈರತ್ವ ಸಾಧಿಸುತ್ತಿರುವ ಬಗ್ಗೆ ಪ್ರತಿಕ್ರಿಯ ನೀಡಿದ ಅವರು, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮೊದಲು ನಾವು ನಮ್ಮ ನೆರೆಹೊರೆಯ ದೇಶವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಕೆಟ್ಟ ಪರಿಸ್ಥಿತಿ ಬಂದಾಗ ನಾವು ಹೋರಾಟಕ್ಕೂ ಸಿದ್ದರಾಗಬೇಕಾಗುತ್ತದೆ. ಇಂದಿರಾಗಾಂಧಿ ಯಾವ ರೀತಿ ಪಾಕಿಸ್ತಾನವನ್ನು ಬೇರ್ಪಡಿಸಿ ಬಾಂಗ್ಲಾದೇಶ ನಿರ್ಮಾಣ ಮಾಡಿದರೋ ಅಂತಹ ಹೋರಾಟ ಮಾಡಬೇಕಾಗುತ್ತದೆ. ಅಂತರ್ ರಾಷ್ಟ್ರೀಯ ನೀತಿ ವಿಚಾರದಲ್ಲಿ ಮೋದಿಯವರು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.