ಸಿಎಂ, ಡಿಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ : ಯತ್ನಾಳ್ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು
ಕಲಬುರಗಿ : ನಗರದ ತಿಮ್ಮಾಪೂರ ವೃತ್ತದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಸೋಮವಾರ ನೇಹಾ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಸಮಾಜದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಘೋಷಣೆಗಳು ಕೂಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಘಟಕದ ವತಿಯಿಂದ ಪ್ರಕರಣ ದಾಖಲಿಸಲಾಗಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶ್ರೀರಾಮ ಸೇನೆಯ ಸಿದ್ದಲಿಂಗ ಆಂದೋಲ ಸ್ವಾಮಿ, ಉಮೇಶ್ ಜಾಧವ್ ಸೇರಿದಂತೆ ಹಲವರಿಂದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ದ ದ್ವೇಷ ಪ್ರಚೋದನೆ ಭಾಷೆ ಬಳಕೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ನೆರೆದ ಜನರ ಮುಂದೆ ಅಕ್ರಮಣಕಾರಿ ಮಾತುಗಳಾಡಿದ್ದು ಅಲ್ಲದೇ ಉದ್ದೇಶ ಪೂರ್ವಕವಾಗಿ ಗೊಂದಲಗಳನ್ನು ಪ್ರಚೋದಿಸಲು ಮತ್ತು ಸಮುದಾಯದೊಳಗೆ ಶಾಂತಿ ಕದಡಲು ಬಳಸಲಾಗುತ್ತಿದ್ದ ಚಾಕು ಮತ್ತು ಡಾಕು ಪದಗಳನ್ನು ಉಪಯೋಗಿಸಿ, ಸಾಮಾಜಿಕ ಶಾಂತಿ ಮತ್ತು ಕೊಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಿರುವ ಆರೋಪದಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.