ಕಲ್ಯಾಣ ಕರ್ನಾಟಕ ಭಾಗದಲ್ಲಿ 137 ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ: ಮಧು ಬಂಗಾರಪ್ಪ
ರಾಜ್ಯದಲ್ಲಿ 10 ಸಾವಿರ ಶಿಕ್ಷಕರ ಭರ್ತಿಗೆ ಚಿಂತನೆ
ಕಲಬುರಗಿ, ಮಾ.8: ಪ್ರಸಕ್ತ (2024-25ನೇ) ಸಾಲಿನ ಆಯವ್ಯಯದಲ್ಲಿ ರಾಜ್ಯಾದ್ಯಂತ 500 ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆ.ಪಿ.ಎಸ್.) ಗಳನ್ನು ಆರಂಭಿಸುವುದಾಗಿ ಘೋಷಿಸಿದ್ದು, ಈ ಪೈಕಿ 137 ಶಾಲೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರಂಭವಾಗಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಕೆ.ಕೆ.ಆರ್.ಟಿ.ಬಿ. ಸಭಾಂಗಣದಲ್ಲಿ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ರಾಜ್ಯದಲ್ಲಿ 297 ಕೆ.ಪಿ.ಎಸ್. ಶಾಲೆ ಇದ್ದು, ಅವುಗಳ ಜೊತೆಗೆ ಈ ವರ್ಷ 500 ಶಾಲೆ ಆರಂಭಿಸಲಾಗುವುದು ಎಂದರು.
ದ್ವಿಭಾಷಾ ಬೋಧನೆ, ವಿಷಯ ಶಿಕ್ಷಕರ ಜೊತೆಗೆ ದೈಹಿಕ, ಸಂಗೀತ ಶಿಕ್ಷಕರು, ಉತ್ತಮ ಮೂಲಸೌಕರ್ಯ, ಶಾಲಾ ಮೈದಾನ ಪರಿಕಲ್ಪನೆ ಒಳಗೊಂಡಿರುವ ಕೆ.ಪಿ.ಎಸ್. ಶಾಲೆಗೆ ಬೇಡಿಕೆ ಹೆಚ್ಚಿರುವ ಕಾರಣ ಮುಂದಿನ 3 ವರ್ಷದಲ್ಲಿ ಎರಡು ಗ್ರಾಮ ಪಂಚಾಯತಿಗಳಿಗೆ ತಲಾ ಒಂದರಂತೆ 3,000 ಕೆ.ಪಿ.ಎಸ್. ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರಿ ಶಾಲೆಯಿಂದ ವಿಮುಖ ಮಾಡಿದವರನ್ನು ಮತ್ತೆ ಸರ್ಕಾರಿ ಶಾಲೆಯತ್ತ ಸೆಳೆಯುವುದರ ಜೊತೆಗೆ ದ್ವಿಭಾಷಾ ಬೋಧನೆಯಲ್ಲಿ ಮಕ್ಕಳು, ಪಾಲಕರಿಗೆ ಅವರ ಆಯ್ಕೆಯ ಭಾಷೆಯಲ್ಲಿಯೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
10 ಸಾವಿರ ಶಿಕ್ಷಕರ ಭರ್ತಿಗೆ ಚಿಂತನೆ:
ರಾಜ್ಯದಲ್ಲಿ ನಮ್ಮ ಸರಕಾರ ಬಂದ ನಂತರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸಿ 14 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಂಡಿದ್ದು, ಇದರಲ್ಲಿ 12 ಸಾವಿರ ಜನರು ಈಗಾಗಲೆ ಶಾಲೆಗೆ ಹಾಜರಾಗಿದ್ದಾರೆ. 800-900 ಜನ ವಿವಿಧ ಕಾರಣದಿಂದ ಕೋರ್ಟ್ ಮೊರೆ ಹೋಗಿದ್ದು, ಆ ಸಮಸ್ಯೆ ಸಹ ಶೀಘ್ರ ಬಗೆಹರಿಯಲಿದೆ. 12 ಸಾವಿರ ಪೈಕಿ 3,900 ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಯೋಜಿಸಲಾಗಿದೆ. 43 ಸಾವಿರ ಅತಿಥಿ ಶಿಕ್ಷಕರನ್ನು ಸಹ ಪಡೆದುಕೊಂಡಿದ್ದೇವೆ. ಕ.ಕ. ಭಾಗದಲ್ಲಿ ಕೆ.ಕೆಆರ್.ಡಿ.ಬಿ. ಮಂಡಳಿ 2,618 ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡಿದ್ದು ಸ್ವಾಗತಾರ್ಹ. ಆಗಾಗ ನಿವೃತ್ತ ಕಾರಣ ಶಿಕ್ಷಕರ ಕೊರತೆ ಹೆಚ್ಚಿರುವುದರಿಂದ, ಈ ವರ್ಷ ಇನ್ನು 10 ಸಾವಿರ ಶಿಕ್ಷಕರ ಭರ್ತಿಗೆ ಚಿಂತನೆ ನಡೆದಿದೆ. ಒಟ್ಟಾರೆಯಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸಮಾನತೆ ಕಲ್ಪಿಸಲು ಆದ್ಯತೆ ನೀಡುವುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
20 ಸಾವಿರ ಶಿಕ್ಷಕರಿಗೆ ತರಬೇತಿ:
ಎಸೆಸೆಲ್ಸಿ, ಪಿಯುಸಿ ಫಲಿತಾಂಶ ಸುಧಾರಣೆಯಾಗಬೇಕು, ಮಕ್ಕಳು ಸರ್ವಾಂಗಿಣ ವಿಕಸನ ಹೊಂದಬೇಕೆಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಅಜೀಂ ಪ್ರೇಮಜಿ ಫೌಂಡೇಷನ್ ಮತ್ತು ಟೋಯೋಟಾ ಸಂಸ್ಥೆಗಳು ತಮ್ಮ ಸಿ.ಎಸ್.ಆರ್. ನಿಧಿಯಡಿ ಬರುವ ಮೇ ಮಾಹೆಯಿಂದ ಮುಂದಿನ ಮಾರ್ಚ್ ವರೆಗೆ ರಾಜ್ಯದ 20 ಸಾವಿರ ಶಿಕ್ಷಕರಿಗೆ ವೃತ್ತಿ, ಬೋಧನ ಕೌಶಲ್ಯ ಹೆಚ್ಚಿಸುವ ತರಬೇತಿ ನೀಡಲಿದೆ ಎಂದರು.
ಮೂರು ಬಾರಿ ಪರೀಕ್ಷೆಗೆ ಸಚಿವರ ಸಮರ್ಥನೆ:
ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಒಂದೇ ತಿಂಗಳಿನಲ್ಲಿ ಮೂರು ಬಾರಿ ಬರೆಯುವುದರಿಂದ ಪರೀಕ್ಷೆಯ ಗಂಭೀರ್ಯತೆ ಇರುವುದಿಲ್ಲ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ ಮೊದಲನೇ ಪರೀಕ್ಷೆ ಎಲ್ಲರಿಗೂ ಕಡ್ಡಾಯವಾಗಿರಲಿದೆ. ಎರಡನೇ ಮತ್ತು ಮೂರನೇ ಪರೀಕ್ಷೆ ಉತ್ತಮ ಅಂಕ ಹೊಂದಲು ಮತ್ತು ಉತ್ತೀರ್ಣರಾಗಿ ಮುಂದಿನ ತರಗತಿಗೆ ಪ್ರವೇಶ ಪಡೆಯಲು ಅನುಕೂಲವಾಗಲೆಂದು ಈ ಪದ್ದತಿ ಜಾರಿಗೆ ತರಲಾಗಿದೆ. ಕಳೆದ ವರ್ಷ ಮೂರನೇ ಪರೀಕ್ಷೆಯಲ್ಲಿ ಹಾಜರಾದ 1.20 ಲಕ್ಷ ಮಕ್ಕಳಲ್ಲಿ 40 ಸಾವಿರ ಮಕ್ಕಳು ತೇರ್ಗಡೆಯಾಗಿ ಮುಂದಿನ ತರಗತಿಗೆ ಪ್ರವೇಶ ಪಡೆದಿದ್ದಾರೆ. ಇದರಿಂದ ಆ ಮಕ್ಕಳ ಒಂದು ವರ್ಷ ಉಳಿದಂತಾಗಿದೆ. ಇಲ್ಲದಿದ್ದರೆ ಆ ಮಕ್ಕಳ ಶಾಲೆಯಿಂದ ವಿಮುಖರಾರುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಮೂರು ಪರೀಕ್ಷೆ ಪದ್ದತಿಗೆ ಮಕ್ಕಳಿಂದಲೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪರೀಕ್ಷೆ ಕುರಿತಂತೆ ಸಚಿವರು ಸಮರ್ಥನೆ ಮಾಡಿಕೊಂಡರು.
1,975 ಮಾದರಿ ಶಾಲೆ ನಿರ್ಮಾಣ:
ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾತನಾಡಿ, 2023-24 ಮತ್ತು 2024-25ನೇ ವರ್ಷ ಶೈಕ್ಷಣಿಕ ವರ್ಷವೆಂದು ಘೋಷಿಸಿ ಅಕ್ಷರ ಆವಿಷ್ಕಾರ ಯೋಜನೆಯಡಿ ಶಾಲೆಗಳ ಬಲವರ್ಧನೆಗೆ ಮಂಡಳಿ ಮುಂದಾಗಿದೆ. ಪ್ರದೇಶದದಲ್ಲಿ 9,247 ಶಾಲೆಗಳಿದ್ದು, ಇದರಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50 ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಯನ್ನಾಗಿ ಮಾಡಲು 2023-24ನೇ ಸಾಲಿಗೆ 1,975 ಶಾಲೆಗಳನ್ನು ಈಗಾಗಲೆ ಗುರುತಿಸಲಾಗಿದೆ. ಮುಂದಿನ 5 ವರ್ಷದಲ್ಲಿ ಹಂತ ಹಂತವಾಗಿ ಪ್ರತಿ ವರ್ಷ 2,000 ರಂತೆ ಉಳಿದ ಶಾಲೆಗಳ ಬಲವರ್ಧನೆಗೆ ಯೋಜನೆ ಹಾಕಿಕೊಂಡಿದ್ದೇವೆ ಎಂದರು.
ಪ್ರಸಕ್ತ 2023-24ನೇ ಸಾಲಿಗೆ ಮಂಡಳಿಗೆ ಹಂಚಿಕೆ ಮಾಡಿದ 3,000 ಕೋಟಿ ರೂ. ಅನುದಾನದಲ್ಲಿ 2,610 ಕೋಟಿ ರೂ. ಗಳ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಶೇ.25 ರಂತೆ 652 ಕೋಟಿ ರೂ. ಹಣ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದ್ದೇವೆ. ಇದರಲ್ಲಿ ಈಗಾಗಲೆ ಪ್ರದೇಶದಲ್ಲಿನ ಶಿಕ್ಷಕರ ಕೊರತೆ ನೀಗಿಸಲು 2,618 ಅತಿಥಿ ಶಿಕ್ಷಕರನ್ನು ಪಡೆದಿದ್ದು, ಅವರ ಗೌರವ ಸಂಭಾವನೆ ಸಹ ಮಂಡಳಿ ಪಾವತಿ ಮಾಡಲಿದೆ ಎಂದರು.
ಇದೇ ಸಂದರ್ಭದಲ್ಲಿ ಅಕ್ಷರ ಆವಿಷ್ಕಾರ ಯೋಜನೆಯ ಪ್ರಗತಿ ವರದಿಯನ್ನು ಸಚಿವ ಎಸ್. ಮಧು ಬಂಗಾರಪ್ಪ, ಡಾ.ಅಜಯ್ ಸಿಂಗ್, ಶಾಸಕ ಎಂ.ವೈ.ಪಾಟೀಲ ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ. ಸುಂದರೇಶ ಬಾಬು, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕೆ.ಕೆ.ಆರ್.ಡಿ.ಬಿ. ಮಂಡಳಿ ಅಧೀನ ಕಾರ್ಯದರ್ಶಿ ದಯಾನಂದ ಪಾಟೀಲ ಉಪಸ್ಥಿತರಿದ್ದರು.