ಕಾಳಗಿ | ರಟಕಲ್ ಗ್ರಾಮದ ಕೆರೆ ಸಂರಕ್ಷಣೆಗೆ ಮನವಿ

ಕಲಬುರಗಿ : ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಪುರಾತನ ಕೆರೆ ಪಾಳು ಬಿದ್ದು ಅಳವಿನಂಚಿನಲ್ಲಿದ್ದು, ಕೂಡಲೇ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಗಮನ ಹರಿಸಿ ಕೆರೆ ಸಂರಕ್ಷಣೆಗೆ ಮುಂದಾಗಬೇಕು ಎಂದು ಹಿಂದೂ ಜಾಗೃತಿ ಸೇನೆ ಕಾಳಗಿ ತಾಲೂಕಾಧ್ಯಕ್ಷ ಶಂಕರ ಚೌಕಾ ಮನವಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಬೇಸಿಗೆ ಬರುವುದಕ್ಕಿಂತ ಮೊದಲೇ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಇಂತಹ ಸಮಯದಲ್ಲಿ ಬೇಸಿಗೆಯಲ್ಲಿ ನೀರಿನ ಆಸರೆ ಆಗಬೇಕಾಗಿದ್ದ ಹಾಗೂ ಸುಮಾರು ಎರಡು ಸಾವಿರ ಎಕರೆ ಭೂಮಿಗೆ ನೀರೂಣಿಸುವ ರಟಕಲ್ ಗ್ರಾಮದ ಅತಿದೊಡ್ಡದಾದ ಕೆರೆಯನ್ನು ಸುತ್ತಮುತ್ತಲಿನ ಜಮೀನಿನ ಮಾಲಕರು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನೂಳಿದ ಅಲ್ಪಸ್ವಲ್ಪ ಸ್ಥಳದಲ್ಲಿ ಗಿಡಗಂಟಿಗಳು ಬೆಳಿದುಕೊಂಡು ಕೆರೆ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಈ ಕೆರೆಯಲ್ಲೇ ಗ್ರಾಮಾಡಳಿತದಿಂದ ಪ್ರತಿವರ್ಷ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆರೆ ಹೂಳೆತ್ತುವ ಕಾರ್ಯ ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಕೂಡಲೇ ಗ್ರಾಮಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ರಟಕಲ್ ಗ್ರಾಮದ ಕೆರೆಯನ್ನು ಮರು ಸರ್ವೆ ಮಾಡಿಸಿ ಕೆರೆ ಒತ್ತುವರಿ ಮಾಡಿದವರ ಮೇಲೆ ಭೂ ಕಬಳಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಕೆರೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಹೂಳೆತ್ತಬೇಕು, ಕೆರೆ ಸುತ್ತಲೂ ರಕ್ಷಣಾ ಗೊಡೆ ನಿರ್ಮಿಸುವ ಮೂಲಕ ಬೇಸಿಗೆಯಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ನಂತರ ರಟಕಲ್ ಗ್ರಾಪಂ ಅಧ್ಯಕ್ಷ ಜಗದೀಪ ಮಾಳಗಿ, ಅಭಿವೃದ್ಧಿ ಅಧಿಕಾರಿ ಮಹಾನಂದ ಗುತ್ತೇದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಂಕರ ಚೌಕಾ, ರಾಜ್ಯ ರೈತ ಸೇನೆ ರೈತ ಸಂಘ ತಾಲೂಕಾಧ್ಯಕ್ಷ ವೀರಣ್ಣ ಗಂಗಾಣಿ, ಮಲ್ಲಿಕಾರ್ಜುನ ಜಮಾದಾರ, ರಾಜಶೇಖರ ಹಂದ್ರೋಳಿ, ಗ್ರಾಪಂ ಸದಸ್ಯ ನಾಗರಾಜ ಹಂದ್ರೋಳಿ, ಸಂಗೀತಾ ಕಿಣ್ಣಿ, ಚಂದ್ರಕಲಾ ಮುಕರಂಬಿ ಇದ್ದರು.