ಸರಕಾರ ಒಂದು ಸಮುದಾಯದ ತುಷ್ಟಿಕರಣಕ್ಕೆ ಮುಂದಾಗಿದೆ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್
ಕಲಬುರಗಿ : ರಾಜ್ಯ ಸರಕಾರ ಒಂದು ಸಮುದಾಯದ ತುಷ್ಟಿಕರಣಕ್ಕೆ ಮುಂದಾಗಿದೆ. ಅದರ ಫಲವಾಗಿ ವಕ್ಫ್ ಬೋರ್ಡ್ ಮೂಲಕ ರೈತರ, ಮಠ-ಮಂದಿರಗಳ, ಜನರ ಆಸ್ತಿಪಾಸ್ತಿ ಕಬಳಿಕೆ ಮಾಡುವ ಮೂಲಕ ಅನ್ಯಾಯ ಮಾಡುತ್ತಿದೆ. ಇದನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದ ತಂಡ ರಾಜ್ಯ ಪ್ರವಾಸ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದ್ದಾರೆ.
ನಗರದ ಹೊರವಲಯದ ನಾಗನಹಳ್ಳಿ ರಸ್ತೆಯಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಡಿ.4, 5 ಹಾಗೂ 6ರಂದು ರಾಜ್ಯಾದ್ಯಂತ ಬಿಜೆಪಿ ಮೂರು ತಂಡಗಳು ಮೂಲಕ ಪ್ರವಾಸ ಕೈಗೊಂಡು ರೈತರ, ಮಠಾಧೀಶರ, ಸಾರ್ವಜನಿಕರ ಭೇಟಿ ಮಾಡಿ, ಸಂವಾದ ಮಾಡಲಿದೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒಂದು ತಂಡ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಎರಡನೇ ತಂಡ ಹಾಗೂ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮೂರನೇ ತಂಡ ಮೂರು ದಿನಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಹೇಳಿದರು.
ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದ ತಂಡ ಕಲ್ಯಾಣ ಕರ್ನಾಟಕದಲ್ಲಿ ಪ್ರವಾಸ ಮಾಡಲಿದ್ದು, ಡಿ.4ರಂದು ಬೀದರ್, ಕಲಬುರಗಿ, ಡಿ.5ರಂದು ಯಾದಗಿರಿ, ರಾಯಚೂರು ಹಾಗೂ ಡಿ.6ರಂದು ಕೊಪ್ಪಳ, ಗದಗ ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದೆ. ಈ ಪ್ರವಾಸದಲ್ಲಿ ಎಲ್ಲರ ಸಮಸ್ಯೆ ಆಲಿಸಿ, ಡಿ.9ರಂದು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಚರ್ಚೆ ನಡೆಸಿ, ರೈತರಿಗೆ ನ್ಯಾಯ ಒದಗಿಸುವ ಕೆಲಸ ರಾಜ್ಯ ಬಿಜೆಪಿ ಮಾಡಲಿದೆ ಎಂದು ಮಾಹಿತಿ ನೀಡಿದರು.
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ :
ಬಿಜೆಪಿ ಆಡಳಿತದ ಅವಧಿಯಲ್ಲಿ ಸಹ ವಕ್ಫ್ ಮೂಲಕ ರೈತರಿಗೆ ನೋಟಿಸ್ ನೀಡಲಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿರುವುದು ಸತ್ಯಕ್ಕೆ ದೂರವಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಯಾವತ್ತೂ ರೈತರಿಗೆ ನೋಟಿಸ್ ನೀಡಿ ಎಂದು ಹೇಳಿಲ್ಲ. ಆದರೆ, ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಕ್ಫ್ ಅದಾಲತ್ ನಡೆಸಿ, ಸರ್ವೇ ಮಾಡಲು ಸೂಚನೆ ನೀಡಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ನಮ್ಮ ಅವಧಿಯಲ್ಲಿ ಈ ರೀತಿ ತಪ್ಪು ಮಾಡಿದ್ದರೆ ಅದು ಸಹ ತಪ್ಪೇ, ನಾವು ಮುಂದೆ ಅಧಿಕಾರಕ್ಕೆ ಬಂದರೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುತ್ತೇವೆ. ಈಗ ನೀವು ಅಧಿಕಾರದಲ್ಲಿದೀರಿ. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಿ.ರಾಜೀವ್ ಸವಾಲ್ ಹಾಕಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ರಾಜ್ಯ ಕಾರ್ಯದರ್ಶಿ ಶರಣು ತಳಕೇರಿ, ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಾಜಿ ಶಾಸಕರಾದ ಸುಭಾಷ ಗುತ್ತೇದಾರ್, ರಾಜಕುಮಾರ್ ಪಾಟೀಲ್ ತೇಲ್ಕೂರ್, ಅರುಣ ಶಹಾಪುರ, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್, ನಿತೀನ್ ಗುತ್ತೇದಾರ್, ಮಣಿಕಂಠ ರಾಠೋಡ, ಅಶೋಕ್ ಬಗಲಿ, ಸಂತೋಷ ಹಾದಿಮನಿ ಸೇರಿ ಇತರರು ಇದ್ದರು.