ಕಲಬುರಗಿ | ಮೆಟ್ರಿಕ್ ಟನ್ ಕಬ್ಬಿಗೆ ದರ ನಿಗದಿ ಮಾಡಿ ಸರಕಾರ ಆದೇಶ : ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್
ಬಿ.ಫೌಜಿಯಾ ತರನ್ನುಮ್
ಕಲಬುರಗಿ : ಕಳೆದ 2023-24ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯ ಆಧಾರದ ಮೇಲೆ ಪ್ರಸಕ್ತ 2024-25ನೇ ಸಾಲಿಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆ ನುರಿಸುವ ಕಬ್ಬಿಗೆ ಮೊದಲ ಕಂತಿನ ರೂಪದಲ್ಲಿ ರೈತರಿಗೆ ಪಾವತಿಸಬೇಕಾದ ನ್ಯಾಯ ಮತ್ತು ಲಾಭದಾಯಕ ಬೆಲೆಯ ದರ (ಎಫ್.ಆರ್.ಪಿ) ನಿಗದಿಪಡಿಸಿ ಎಂದು ರಾಜ್ಯ ಸರಕಾರ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಪ್ರಸಕ್ತ 2024-25ನೇ ಸಾಲಿನಲ್ಲಿ 01.07.2024 ರಿಂದ 30.06.2025ರ ವರೆಗೆ ಆಳಂದ ತಾಲೂಕಿನ ಭೂಸನೂರ ಎನ್.ಎಸ್.ಎಲ್. ಶುಗರ್ಸ್ ಕಾರ್ಖಾನೆ 9,34,763 ಮೆಟ್ರಿಕ್ ಟನ್ ಕಬ್ಬು ನುರಿಸಲಿದ್ದು, 91,956 ಸಕ್ಕರೆ ಉತ್ಪಾದಿಸಲಿದೆ. ಶೇ.9.84 ಸಕ್ಕರೆ ಇಳುವರಿ ಬರಲಿದ್ದು, ಪ್ರತಿ ಮೆ.ಟನ್ ಕಬ್ಬಿಗೆ 3,264 ರೂ.ದರ ನಿಗದಿ ಮಾಡಲಾಗಿದೆ.
ಅಫಜಲ್ಪುರ ತಾಲೂಕಿನ ಚೌಡಾಪುರ ಕೆ.ಪಿ.ಆರ್. ಶುಗರ್ಸ್ ಕಾರ್ಖಾನೆ 11,35,389 ಮೆಟ್ರಿಕ್ ಟನ್ ಕಬ್ಬು ನುರಿಸಲಿದ್ದು, 91,170 ಸಕ್ಕರೆ ಉತ್ಪಾದಿಸಲಿದೆ. ಶೇ.10.12 ಸಕ್ಕರೆ ಇಳುವರಿಯೊಂದಿಗೆ ಪ್ರತಿ ಮೆ.ಟನ್ ಕಬ್ಬಿಗೆ 3,357 ರೂ. ದರ ನಿಗದಿ ಮಾಡಲಾಗಿದೆ.
ಅದೇ ರೀತಿ ಅಫಜಲ್ಪುರ ತಾಲೂಕಿನ ಹವಳಗಾದ ರೇಣುಕಾ ಶುಗರ್ಸ್ ಕಾರ್ಖಾನೆ 8,92,152 ಮೆಟ್ರಿಕ್ ಟನ್ ಕಬ್ಬು ನುರಿಸಲಿದ್ದು, 56,828 ಸಕ್ಕರೆ ಉತ್ಪಾದಿಸಲಿದೆ. ಶೇ.9.15 ಸಕ್ಕರೆ ಇಳುವರಿ ಹೊಂದಿದ್ದು, ಪ್ರತಿ ಮೆ.ಟನ್ ಕಬ್ಬಿಗೆ 3,151 ರೂ.ದರ ಹಾಗೂ ಯಡ್ರಾಮಿ ತಾಲೂಕಿನ ನಾಗರಹಳ್ಳಿಯ ಉಗಾರ ಶುಗರ್ಸ್ ಕಾರ್ಖಾನೆ 3,79,352 ಮೆಟ್ರಿಕ್ ಟನ್ ಕಬ್ಬು ನುರಿಸಲಿದ್ದು, 34,890 ಸಕ್ಕರೆ ಉತ್ಪಾದಿಸಲಿದೆ. ಶೇ.9 ಸಕ್ಕರೆ ಇಳುವರಿಯೊಂದಿಗೆ ಪ್ರತಿ ಮೆ.ಟನ್ ಕಬ್ಬಿಗೆ 3,151 ರೂ. ದರ ನಿಗದಿ ಮಾಡಲಾಗಿದೆ.
ರೈತರು ಆಯಾ ಸಮೀಪದ ಸಕ್ಕರೆ ಕಾರ್ಖಾನೆಗೆ ಕಬ್ಬು ಮಾರಾಟ ಮಾಡುವ ಮೂಲಕ ಸೌಲಭ್ಯ ಪಡೆಯಬೇಕೆಂದು ಡಿ.ಸಿ. ಬಿ.ಫೌಝಿಯಾ ತರನ್ನುಮ್ ಅವರು ತಿಳಿಸಿದ್ದಾರೆ.