ನೇಮಕಾತಿ ವಿಚಾರದಲ್ಲಿ ಸರಕಾರದಿಂದ ದ್ವಂದ್ವ ನೀತಿ : ನಮೋಶಿ ಕಿಡಿ
ಶಶೀಲ್ ನಮೋಶಿ
ಕಲಬುರಗಿ : ರಾಜ್ಯ ಸರಕಾರ ಒಳಮೀಸಲಾತಿ ಜಾರಿಗೊಳಿಸುವುದಾಗಿ ಹೇಳುತ್ತಿರುವುದು ಸ್ವಾಗತಾರ್ಹ, ಆದರೆ ಇದೇ ನೆಪದಲ್ಲಿ ಹಲವು ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಬಹುದಿನಗಳ ಬೇಡಿಕೆಯಾಗಿದ್ದ ಒಳಮೀಸಲಾತಿ ಮತ್ತು ಉದ್ಯೋಗ ನೇಮಕಾತಿಯಲ್ಲಿನ ಮೀಸಲಾತಿಯನ್ನು ಜಾರಿಗೊಳಿಸುತ್ತೇವೆ ಎಂಬ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ರಾಜ್ಯದಲ್ಲಿ ಈಗಾಗಲೇ 2.55 ಲಕ್ಷ ಉದ್ಯೋಗ ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುವುದಾಗಿ ಹೇಳಿಕೆ ನೀಡಿದ್ದೀರಿ, ಅತಿಥಿ ಶಿಕ್ಷಕರ ಸಮಸ್ಯೆ, ಹಳೆಪಿಂಚಣಿ ಜಾರಿ ಸೇರಿದಂತೆ ಹಲವಾರು ಭರವಸೆಗಳನ್ನು ಸರಕಾರ ಈಡೇರಿಸಲು ವಿಫಲವಾಗಿರುವಾಗ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಿರುವುದು ಸರಕಾರದ ಕಾರ್ಯಕ್ಷಮತೆ ಮೇಲೆ ಹಾಗೂ ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಈಗಾಗಲೇ ಶಿಕ್ಷಣ ಮಂತ್ರಿಗಳು 5,500 ಶಿಕ್ಷಕರ ನೇಮಕಾತಿ ಮಾಡುವುದಾಗಿ ಘೋಷಿಸಿದ್ದರು. ಅಲ್ಲದೇ ಅನೇಕ ಅನುದಾನಿತ ಹುದ್ದೆಗಳನ್ನು ತುಂಬುವ ಅದೇಶ ಮಾಡಿರುವ ಬೆನ್ನಲ್ಲೇ ಸರಕಾರದ ಈ ಮೀಸಲಾತಿ ಜಾರಿ ಕುರಿತ ಜಾಣ ಕಾಲ ಹರಣವನ್ನು ನಾವು ಒಪ್ಪುವುದಿಲ್ಲ. ಹಲವಾರು ವಿದ್ಯಾವಂತ ಉದ್ಯೋಗಾಕಾಂಕ್ಷಿಗಳ ಭವಿಷ್ಯದ ವಿಷಯದಲ್ಲಿ ದ್ವಂದ್ವ ಸೃಷ್ಟಿಸಿ ರಾಜಕೀಯ ಗೊಳಿಸಬಾರದು ಎಂದು ನಮೋಶಿ ಕಿಡಿಕಾರಿದ್ದಾರೆ.
ಒಳಮೀಸಲಾತಿ ಜಾರಿಯ ವಿಚಾರವಾಗಿ ಈಗಾಗಲೇ ಸದಾಶಿವ ಆಯೋಗ ಹಾಗು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಆದೇಶ ನೀಡಿದ್ದರೂ ಕೂಡ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಅದನ್ನು ಜಾರಿಗೊಳಿಸಲು ಇನ್ನೊಂದು ಆಯೋಗ ರಚಿಸಿ, ವರದಿ ಬಂದ ಬಳಿಕ ಜಾರಿಗೊಳಿಸುತ್ತೇವೆ ಎಂಬ ನಿರ್ಧಾರ ಸಮಂಜಸವಲ್ಲ. ರಾಜ್ಯ ಸರಕಾರ ದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೂ ಬಗ್ಗದೆ ಕೇವಲ ಕಾಲಹರಣ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರಕಾರ ನಂಬಿಕೆ ಉಳಿಸಿಕೊಳ್ಳಬೇಕಿದೆ. ಸರಕಾರದ ಹೊಸ ಆಯೋಗ ಎಂಬ ಅಸಮಂಜಸ ನಿರ್ಧಾರ ಕೈಬಿಟ್ಟು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಸಮಯ ವ್ಯರ್ಥ ಮಾಡದೆ ಈ ಕುರಿತು ತಕ್ಷಣ ನಿರ್ಧಾರ ಕೈಗೊಂಡು, ಯಾವುದೇ ನೇಮಕಾತಿಗಳಿಗೆ ತೊಂದರೆಯಾಗದಂತೆ ಹಾಗೂ ಹೊಸ ನೇಮಕಾತಿ ಕೂಡಲೇ ಆಗುವ ರೀತಿಯಲ್ಲಿ ಸೂಕ್ತ ಹಾಗೂ ಸ್ಪಷ್ಟ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.