ಯಾವುದೇ ಒಂದು ಯೋಜನೆ ಜನರಿಗೆ ಮುಟ್ಟಬೇಕೆಂದರೆ ಸರಕಾರಕ್ಕೆ ಮಾತೃ ಹೃದಯವಿರಬೇಕು: ಪ್ರಿಯಾಂಕ್ ಖರ್ಗೆ
ಕಲಬುರಗಿ: ಯಾವುದೇ ಒಂದು ಯೋಜನೆ ಜನರಿಗೆ ಮುಟ್ಟಬೇಕೆಂದರೆ ಸರಕಾರಕ್ಕೆ ಮಾತೃ ಹೃದಯವಿರಬೇಕು. ಅಂತಹ ಹೃದಯ ಕಾಂಗ್ರೆಸ್ ಸರ್ಕಾರಕ್ಕಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಹೊಸದಾಗಿ ರೂ 55 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಟ್ರಾಮಾ ಕೇರ್ ಸೆಂಟರ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಟ್ರಾಮಾ ಕೇರ್ ಸೆಂಟರ್ ಗೆ ಅಡಿಗಲ್ಲು ಹಾಕಿದ್ದೇ ಕಾಂಗ್ರೆಸ್ ಸರ್ಕಾರ ಈಗ ಉದ್ಘಾಟನೆ ಮಾಡಿದ್ದೂ ಕೂಡಾ ಕಾಂಗ್ರೆಸ್ ಸರ್ಕಾರ. ಇದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ಟ್ರಾಮಾ ಕೇರ್ ಸೆಂಟರ್ ಈ ಭಾಗದ ಹೆಮ್ಮೆಯ ಆರೋಗ್ಯ ಕೇಂದ್ರವಾಗಿದ್ದು, ಕಾಂಗ್ರೆಸ್ ಸರ್ಕಾರ ಈ ಹಿಂದೆ ಅಧಿಕಾರದಲ್ಲಿದ್ದಾಗ ಅಡಿಗಲ್ಲು ಹಾಕಲಾಗಿತ್ತು. ಆದರೆ ಮಧ್ಯೆದ ಐದು ವರ್ಷಗಳ ಅವಧಿಯಲ್ಲಿ ಉದ್ಘಾಟನೆ ಮಾಡಲಾಗಿರಲಿಲ್ಲ. ಈಗ ನಾವು ಉದ್ಘಾಟನೆ ಮಾಡಿದ್ದೇನೆ.ಎಂದರು.
ಕಲಬುರಗಿ ಯಲ್ಲಿ ಹಲವಾರು ಹೆಸರಾಂತ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಎಸ್ ಐಸಿ, ಕಿದ್ವಾಯಿ, ಜಯದೇವ, ಜಿಮ್ಸ್ ನಂತಹ ರಾಷ್ಟ್ರ ಮಟ್ಟದ ಉತೃಷ್ಠ ವೈದ್ಯಕೀಯ ಸೇವೆ ಒದಗಿಸುತ್ತಿವೆ. ಇದು ಹೆಮ್ಮೆಯ ವಿಚಾರ ಎಂದರು.
ಆರ್ಟಿಕಲ್ 371 J ಅಡಿಯಲ್ಲಿ ಕಳೆದ ಸಾಲಿನಲ್ಲಿ ಈ ಭಾಗದ 1,000 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಲಭ್ಯವಾಗಿವೆ ಎಂದ ಸಚಿವರು ಕಲ್ಯಾಣ ಕರ್ನಾಟಕದಲ್ಲಿ ಆರೋಗ್ಯದ ಕ್ರಾಂತಿಯಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವರು ಪ್ರಯತ್ನಪಡುತ್ತಿದ್ದಾರೆ ಹೀಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ 'ಹೆಲ್ತ್ ಎಕ್ಸಲೆನ್ಸ್ ಸೆಂಟರ್' ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದರು.
ವೇದಿಕೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಶರಣ ಪ್ರಕಾಶ ಪಾಟೀಲ್, ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಝ್ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ ಸೇರಿದಂತೆ ಟ್ರಾಮಾ ಕೇರ್ ಸೆಂಟರ್ ನ ಅಧಿಕಾರಿಗಳು ಇದ್ದರು.