ಕಲಬುರಗಿ: ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಅನುದಾನಕ್ಕೆ ಗ್ರೀನ್ ಸಿಗ್ನಲ್

ಕಲಬುರಗಿ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಬರುವ ಜೇವರ್ಗಿ ತಾಲೂಕಿನ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಸದರಿ ಯೋಜನೆಯ ಬಾಕಿ ಉಳಿದ ಕಾಮಗಾರಿಗಳ ಅನುಷ್ಠಾನಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮದಿಂದ ಹಸಿರು ನಿಶಾನೆ ದೊರಕಿದೆ ಎಂದು ತಿಳಿದುಬಂದಿದೆ.
ಬುಧವಾರ ಸಿಎಂ ಕೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೆಬಿಜೆಎನ್‌ಎಲ್ ನಿರ್ದಶಕರ ಮಂಡಳಿಯ 142 ನೇ ಸಭೆಯಲ್ಲಿ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಸದರಿ ಪ್ರಸ್ತಾವನೆ ಪ್ರಧಾನವಾಗಿ ಚರ್ಚೆಯಾಗಿ ಅಂಗೀಕಾರವಾಗಿದೆ.
ಯೋಜನೆಯ ಹಂತ 1, 2 ಮತ್ತು 3ರ ಬಾಕಿ ಉಳಿದಿರುವ ವಿತರಣಾ ಕಾಲುವೆ ಕಾಮಗಾರಿಗಳ ಅನುಷ್ಠಾನಕ್ಕೆ ಯೋಜನೆ- 359. 67 ಕೋಟಿ ರು ಮೊತ್ತದ ಕಾಮಗಾರಿಗಳ ಟೆಂಡರ್ ಕರೆಯಲು ಕೆಬಿಜೆಎನ್‌ಎಲ್ ನಿರ್ದೇಶಕ ಮಂಡಳಿ ಸಭೆಯಲ್ಲಿ ಅನುಮೋದನೆ ದೊರಕಿದೆ. ಶೀಘ್ರದಲ್ಲೇ ಯೋಜನೆಯ ಹಾಕಿ ಉಳಿದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 359. 67 ಕೋಟಿ ರು ಮೊತ್ತದ ಟೆಂಡರ್‌ಗೆ ಅನುಮೋದನೆ ದೊರಕಿದೆ. ಈ ನಿರ್ಣಯ ಮಲ್ಲಾಬದ್ ಏತ ನೀರಾವರಿ ಯಜನೆಯ ತ್ವರಿತ ಅನುಷ್ಠಾನಕ್ಕೆ ತುಂಬಾ ನೆರವಾಗಲಿದೆ. ಯೋಜನೆಯ 3 ಹಂತಗಳಲ್ಲಿ ಬಾಕಿ ಇರುವ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ರೈತರ ಹೊಲಗದ್ದೆಗೆ ನೀರು ಹರಿಸಲ ಕೆಬಿಜೆಎನ್‌ಎಲ್ ನಿರ್ದೇಶ ಮಂಡಳಿಯ ಈ ನಿರ್ಣಯ ಸಹಕಾರಿಯಾಗಲಿದೆ.
ಮಲ್ಲಾಬಾದ್ ಏತ ನೀರಾವರಿ ಯೋಜನೆಯಡಿಯಲ್ಲಿ ಜೇವರ್ಗಿ ಮತ್ತು ಶಹಾಪೂರ ತಾಲೂಕಿನಡಿ ಬರುವ 68 ಹಳ್ಳಿಗಳಿಗೆ 33, 860 ಹೆಕ್ಟರ್ ಭೂಮಿಗೆ ನೀರಾವರಿ ಸೌಲಭ್ಯ ನೀಡುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಲಿಫ್ಟ್ 1, 2 ಮತ್ತು 3 ರ ಮುಖ್ಯ ಕಾಲುವೆ ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.
ಲಿಫ್ಟ್ 1 ರಡಿಯ ವಿತರಣಾ ಕಾಲುವೆ 1 ರಿಂದ 5 ರ ವರೆಗಿನ 7144 ಹೆಕ್ಟರ್‌ಗೆ ನೀರಾವರಿ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿವೆ. ಬಾಕಿ ಉಳಿದ 26, 716 ಹೆಕ್ಟರ್ ಪ್ರದೇಶಕ್ಕೆ ಕಾಲುವೆ ಕೊನೆಯವರೆಗೂ ಸಮಗ್ರವಾಗಿ ನೀರುಣಿಸಲು 3 ಪ್ಯಾಕೇಜ್ ಕಾಮಗಾರಿ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಅದೇ ಪ್ರಸ್ತಾವನೆಗೆ ಸಿಎಂ ಸಿದ್ದರಾಮಯ್ಯನವರು ಹಾಗೂ ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದ ಕೆಬಿಜೆಎನ್‌ಎಲ್ ನಿರ್ದೇಶಕರ ಮಂಡಳಿ ಸಭೆ ಅನುಮೋದಿಸಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಗೆ ಡಾ. ಅಜಯ್ ಅಭಿನಂದನೆ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಉಪಸ್ಥಿತಿಯಲ್ಲಿ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದಂತಹ ಕೆಬಿಜೆಎನ್‌ಎಲ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ಮಲ್ಲಾಬಾದ್ ಏತ ನೀರಾವರಿ ಯೋಜನೆ 359. 67 ಕೋಟಿ ರು ಮೊತ್ತದ ಕಾಮಗಾರಿಗಳ ಟೆಂಡರ್‌ಗೆ ಅನುಮೋದನೆ ದೊರಕಿರೋದು ಯೋಜನೆಯ ಅನುಷ್ಠಾನದಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ಶೀಘ್ರ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿಗಳು ಆರಂಭವಾಗಲಿವೆ ಎಂದು ಹೇಳಿರುವ ಕೆಕೆಆರ್‌ಡಿಬಿ ಅಧ್ಯಕ್ಷರೂ ಆಗಿರುವ ಜೇವರ್ಗಿ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ಸದರಿ ಕಾಮಗಾರಿಗಳಿಗೆ ಅನುಮೋದನೆ ನೀಡಿರುವ ಸಿಎಂ ಹಾಗೂ ಡಿಸಿಎಂ ಇಬ್ಬರನ್ನೂ ಅಭಿನಂದಿಸೋದಾಗಿ ಹೇಳಿದ್ದಾರೆ.