ಕಲಬುರಗಿ | ಅಕ್ರಮ ಮರಳು ಸಾಗಾಟದ ಲಾರಿಯಡಿಗೆ ಸಿಲುಕಿ ಹೆಡ್ ಕಾನ್ಸ್ಟೇಬಲ್ ಮೃತ್ಯು: ಕೊಲೆ ಶಂಕೆ
ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರಾಕ್ಟರ್ ಹರಿದು ಕರ್ತವ್ಯ ನಿರತ ಹೆಡ್ ಕಾನ್ಸ್ಟೇಬಲ್ ಒಬ್ಬರು ಮೃತಪಟ್ಟ ಘಟನೆ ಜೇವರ್ಗಿ ತಾಲೂಕು ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲ್ಲೂರು ಚೆಕ್ ಪೋಸ್ಟ್ ಬಳಿ ನಡೆದಿರುವುದು ವರದಿಯಾಗಿದೆ.
ಕಲಬುರಗಿ, ಜೂ.16: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರಾಕ್ಟರ್ ಹರಿದು ಕರ್ತವ್ಯ ನಿರತ ಹೆಡ್ ಕಾನ್ಸ್ಟೇಬಲ್ ಒಬ್ಬರು ಮೃತಪಟ್ಟ ಘಟನೆ ಜೇವರ್ಗಿ ತಾಲೂಕು ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲ್ಲೂರು ಚೆಕ್ ಪೋಸ್ಟ್ ಬಳಿ ನಡೆದಿರುವುದು ವರದಿಯಾಗಿದೆ.
ಇದೊಂದು ಅಪಘಾತವೇ ಅಥವಾ ಅಕ್ರಮ ಮರಳು ಸಾಗಾಟಗಾರರು ಟ್ರಾಕ್ಟರ್ ಹರಿಸಿ ಹತ್ಯೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆದೇಶಿಸಿದ್ದಾರೆ.
ನೆಲೋಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್, ಅಫ್ಝಲಪುರ ತಾಲೂಕಿನ ಚೌಡಾಪೂರ್ ತಾಂಡಾ ನಿವಾಸಿ ಮಯೂರ ಚವ್ಹಾಣ್(51) ಮೃತಪಟ್ಟವರು. ಅಕ್ರಮ ಮರಳು ಸಾಗಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಯೂರ ಅವರು ತಪಾಸಣೆಗೆಂದು ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಬೈಕಿನಲ್ಲಿ ತೆರಳಿದ್ದರೆನ್ನಲಾಗಿದೆ. ಬಳಿಕ ಅವರ ಮೃತದೇಹ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರಾಕ್ಟರ್ ನಡಿಗೆ ಸಿಲುಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಕರೆ ಮಾಡಿ ಮಾತನಾಡಿದ್ದು ತನಿಖೆಗೆ ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.
ಮೃತ ಪೊಲೀಸ್ ಪೇದೆ ಕುಟುಂಬಕ್ಕೆ ಸಾಂತ್ವನ ಹೇಳಿರುವ ಸಚಿವರು, ಸರಕಾರ ವತಿಯಿಂದ ಶೀಘ್ರದಲ್ಲೇ ಸೂಕ್ತ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.
"ಜಿಲ್ಲೆಯಲ್ಲಿ ಅಕ್ರಮ ಮರುಳು ಸಾಗಣೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈಗಾಗಲೇ ಕಂದಾಯ ಹಾಗೂ ಪೊಲೀಸ್ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದ್ದರೂ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಂಬಂಧಿಸಿದ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆದೇಶ ನೀಡಿ ಈ ಕೂಡಲೇ ಅಕ್ರಮ ಮರುಳು ಸಾಕಣೆ ವಿರುದ್ದ ಕಾನೂನು ಕ್ರಮ ಜರುಗಿಸಲು ನಿರ್ದೇಶಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.
ಹೆಡ್ ಕಾನ್ಸ್ಟೇಬಲ್ ಮಯೂರ ಚವ್ಹಾಣ್ ಅವರ ಸಾವು ಅಪಘಾತವೇ ಅಥವಾ ಕೊಲೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಇಶಾ ಪಂತ್ ತಿಳಿಸಿದ್ದಾರೆ.