ಐ.ಟಿ.ಎಫ್ ಮೆನ್ಸ್ ಕಲಬುರಗಿ ಓಪನ್-2024 ಟೆನಿಸ್ ಟೂರ್ನಿ
ಟೂರ್ನಿ ಯಶಸ್ಸಿಗೆ ಸಕಲ ಸಿದ್ಧತೆ: ಬಿ.ಫೌಝಿಯಾ ತರನ್ನುಮ್
ಕಲಬುರಗಿ : ಐ.ಟಿ.ಎಫ್ ಮೆನ್ಸ್ ಕಲಬುರಗಿ ಓಪನ್-2024 ಟೆನಿಸ್ ಟೂರ್ನಿಗೆ ಕಲಬುರಗಿ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದ್ದು, ದೇಶ ವಿದೇಶ ಆಟಗಾರರ ಪ್ರದರ್ಶನ ಕಣ್ತುಂಬಿಕೊಳ್ಳಲು ಕಲಬುರಗಿ ಜನತೆ ಕಾಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದ್ದಾರೆ.
ಸೋಮವಾರ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ 25,000 ಯು.ಎಸ್. ಡಾಲರ್ ಮೊತ್ತದ ಟೂರ್ನಿಯ ಅರ್ಹತಾ ಪಂದ್ಯಾವಳಿಗಳು ಮುಕ್ತಾಯವಾದ ಕಾರಣ ಮಂಗಳವಾರದಿಂದ ಜರುಗುವ ಪ್ರಮುಖ ಸುತ್ತಿನ ಪಂದ್ಯಾವಳಿಯ ಸಿಂಗಲ್ಸ್ ಮತು ಡಬಲ್ಸ್ ಡ್ರಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ವರ್ಷ ಸಹ ತಮ್ಮ ಅವಧಿಯಲ್ಲಿಯೇ ಟೆನಿಸ್ ಟೂರ್ನಿ ಆಯೋಜಿಸಿದ ಅನುಭವದ ಆಧಾರದ ಮೇಲೆ ಈ ವರ್ಷ ಆಟಗಾರರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಅಧಿಕಾರಿಗಳನ್ನೊಳಗೊಂಡ 7 ಸಮಿತಿಗಳು ರಚಿಸಲಾಗಿದೆ. ಏನೇ ಲೋಪದೋಷಗಳಿದಲ್ಲಿ ಆಟಗಾರರು ತಮ್ಮ ಗಮನಕ್ಕೆ ತಂದಲ್ಲಿ ಅದನ್ನು ತಕ್ಷಣವೇ ಸರಿಪಡಿಸಲಾಗುವುದು ಎಂದು ತಿಳಿಸಿ ದೇಶ-ವಿದೇಶದಿಂದ ಬಂದ ಆಟಗಾರರಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ ಮಾತನಾಡಿ, ಕಲಬುರಗಿ ಮತ್ತೇ ಟೆನಿಸ್ ಜಾತ್ರೆಗೆ ಸಜ್ಜಾಗಿದೆ. ಕಲಬುರಗಿ ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಟೆನಿಸ್ ಕ್ರೀಡೆ ಉತ್ತೇಜನಕ್ಕೆ ಟೊಂಕ ಕಟ್ಟಿ ನಿಂತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಸ್ವತಃ ಟೆನಿಸ್ ಆಟಗಾರರಾಗಿರುವ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆ.ಎಸ್.ಎಲ್.ಟಿ.ಎ. ಟೂರ್ನಮೆಂಟ್ ಡೈರೆಕ್ಟರ್ ಪೀಟರ್ ವಿಜಯಕುಮಾರ, ಐ.ಟಿ.ಎಫ್ ಸೂಪರವೈಸರ್ ಪುನೀತ್ ಗುಪ್ತಾ, ಬಿ.ಎಸ್.ಎನ್.ಎಲ್. ಜನರಲ್ ಮ್ಯಾನೇಜರ್ ಪಣಿ ಪ್ರಸಾದ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಟೆನಿಸ್ ಆಟಗಾರರು, ಕೆ.ಎಸ್.ಎಲ್.ಟಿ.ಎ. ಸಿಬ್ಬಂದಿ ವರ್ಗ ಇದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಸ್ವಾಗತಿಸಿದರು.
ಪ್ರಮುಖ ಸುತ್ತಿನ ಸಿಂಗಲ್ಸ್ ಪಂದ್ಯಗಳಿಗೆ ಕರ್ನಾಟಕದ ರಿಶಿ ರೆಡ್ಡಿ, ಮನೀಷ್ ಗಣೇಶ ಸೇರಿ ನಾಲ್ವರು ಭಾರತೀಯರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದಾರೆ. ಇನ್ನು ರವಿವಾರ ಮತ್ತು ಭಾನುವಾರ ನಡೆದ ಅರ್ಹತಾ ಪಂದ್ಯದಲ್ಲಿ ಗೆದ್ದುಕೊಂಡ 7 ಜನ ಭಾರತೀಯರು ಮತ್ತು ಓರ್ವ ಇಂಡೋನೇಷಿಯಾ ಆಟಗಾರ ಪ್ರಮುಖ ಸುತ್ತಿನ ಪಂದ್ಯಗಳಿಗೆ ಅರ್ಹತೆ ಪಡೆದಿದ್ದಾರೆ.
ಇನ್ನು ಸಿಂಗಲ್ಸ್ ಮತ್ತು ಡಬಲ್ಸ್ ಕಿರೀಟಕ್ಕೆ ಒಟ್ಟಾರೆಯಾಗಿ ಆತಿಥ್ಯ ವಹಿಸಿಕೊಂಡ ಭಾರತ ಸೇರಿದಂತೆ ಅಮೆರಿಕಾ, ಇಂಡೋನೇಷಿಯಾ, ಕೋರಿಯಾ, ಜಪಾನ್, ಜರ್ಮನಿ, ರಷ್ಯಾ, ಉಜ್ಬೇಕಿಸ್ತಾನ್ ಆಟಗಾರರ ನಡುವಿನ ತೀವ್ರ ಸೆಣಸಾಟಕ್ಕೆ ಬಿಸಿಲು ನಗರಿ ಕಲಬುರಗಿ ಸಾಕ್ಷಿಯಾಗಲಿದೆ.
ಇನ್ನು ನಿಗದಿತ ವೇಳಾಪಟ್ಟಿ ಪ್ರಕಾರ ಡಬಲ್ಸ್ ಫೈನಲ್ ಪಂದ್ಯ ಶನಿವಾರ ಮತ್ತು ಸಿಂಗಲ್ಸ್ ಫೈನಲ್ ಪಂದ್ಯ ರವಿವಾರ ನಡೆಯಲಿದೆ.