ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ : ಶಾಸಕ ಜನಾರ್ದನ ರೆಡ್ಡಿ ಹೇಳಿದ್ದೇನು?
ಜನಾರ್ದನ ರೆಡ್ಡಿ
ಬೆಂಗಳೂರು : ಮಾಜಿ ಸಚಿವ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಬಳ್ಳಾರಿ ಭೇಟಿಗೆ ಇದ್ದ ನಿಷೇಧ ಅಂತ್ಯವಾಗಿದೆ. ಅಲ್ಲದೆ, ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿ ಸೋಮವಾರ ಆದೇಶಿಸಿದೆ.
ಸೋಮವಾರ ಈ ಸಂಬಂಧ ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಜನಾರ್ದನ ರೆಡ್ಡಿ ಅವರು,"14 ವರ್ಷಗಳ ನಂತರ ಬಳ್ಳಾರಿಗೆ ತೆರಳಲು ಅನುಮತಿ ನೀಡಿ ಸುಪ್ರೀಂಕೋರ್ಟ್ ಆದೇಶ ಬಂದಿದೆ. ಕೊನೆಯ ಉಸಿರು ಇರುವವರೆಗೂ ಬಳ್ಳಾರಿಯಲ್ಲಿ ಇರುತ್ತೇನೆ ಎಂದು ಭಾವುಕರಾಗಿ ನುಡಿದರು.
ನವರಾತ್ರಿ ಅ.3ರಂದು ಆರಂಭವಾಗಲಿದೆ. ಇದೇ ಗುರುವಾರ ಬೆಳಿಗ್ಗೆ ಬಳ್ಳಾರಿಗೆ ಭೇಟಿ ಕೊಡಲಿದ್ದೇನೆ . ಬಳ್ಳಾರಿಯಲ್ಲಿ ವಿವಿಧ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದರು.
ಜನ್ಮ ಸ್ಥಳ ಪ್ರತಿಯೊಬ್ಬನಿಗೂ ಮುಖ್ಯವಾಗುತ್ತದೆ.ಯಾವುದೇ ಊರಿಗಿಂತ ನಮ್ಮ ಹುಟ್ಟೂರು ನಮಗೆ ಮೇಲು ಎಂಬುದು ಹಿರಿಯರ ಮಾತು. ಮೊದಲು ಗಂಗಾವತಿಗೆ ತೆರಳಿ, ಹನುಮಂತನ ದರ್ಶನ ಪಡೆದು ರಾಜಕೀಯ ಪುನರ್ ಜನ್ಮ ನೀಡಿದ ಜನರ ಜೊತೆ ಮಾತನಾಡುವೆ ಎಂದು ಹೇಳಿದರು.
ಬಳ್ಳಾರಿಗೆ ಅನೇಕ ಒಳ್ಳೆಯ ಕೆಲಸ ಮಾಡಿದ್ದು, ಅದು ಜನರಿಗೂ ಗೊತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ದೊಡ್ಡ ಪ್ರಮಾಣದ ಅಭಿವೃದ್ಧಿ ಕೆಲಸಗಳು ಆಗಿದ್ದವು. ಬಳ್ಳಾರಿಯ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಕನಸುಗಳಿವೆ ಎಂದರು.