ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು: ಸತ್ಯಂಪೇಟೆ
ಕಲಬುರಗಿ: ದಿನದಿಂದ ದಿನಕ್ಕೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಬಹಳಷ್ಟು ದೊಡ್ಡದಿದೆ ಎಂದು ಪತ್ರಕರ್ತ- ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಜೇವರ್ಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ದತ್ತು ಗ್ರಾಮವಾದ ಶಖಾಪೂರ(ಎಸ್)ನ ತಪೋವನ ಮಠದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ 'ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕಾ ರಂಗದ ಪಾತ್ರ' ಎಂಬ ವಿಷಯ ಕುರಿತು ಮಾತನಾಡಿದರು.
ಇಂದಿನ ದಿನಗಳಲ್ಲಿ ಸಮೂಹ ಮಾಧ್ಯಮಗಳು ಸಾಮಾಜಿಕ ಬದಲಾವಣೆಯಲ್ಲಿ ಮಹತ್ವದ ಪಾತ್ರವಹಿಸಬೇಕು. ಜನರ ದೃಷ್ಟಿಕೋನ, ನಂಬಿಕೆ, ಕೌಶಲಗಳ ಬದಲಾವಣೆ ಆಗಬೇಕು. ಈ ಬದಲಾವಣೆ ತರಲು ಶಿಕ್ಷಣ, ತಿಳಿವಳಿಕೆ ಮೂಡಿಸುವ ಕೆಲಸ ಸಮೂಹ ಮಾಧ್ಯಮಗಳು ಮಾಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಡಾ. ಸಿದ್ಧರಾಮ ಶಿವಾಚಾರ್ಯರು ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾದ ಪತ್ರಿಕಾರಂಗವು ಸಮಾಜ ಅಭಿವೃದ್ಧಿಗೆ ಬದ್ಧವಾಗಿರಬೇಕು. ಸಮಾಜದಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಶರಣಪ್ಪ ಸೈದಾಪೂರ, ಜೇವರ್ಗಿ ತಾಲೂಕಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಲಿಂಗರಾಜ ಹಿರೇಗೌಡ, ಕಲಬುರಗಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಸುನಿಲ್ ರಾಠೋಡ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಹಾಗೂ ಸ್ವಯಂ ಸೇವಕರು ಭಾಗವಹಿಸಿದ್ದರು.