ಕಲಬುರಗಿ| ಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ: ಪ್ರಿನ್ಸಿಪಾಲ್, ವಾರ್ಡನ್ ಅಮಾನತು
ಸಾಂದರ್ಭಿಕ ಚಿತ್ರ
ಕಲಬುರಗಿ: ಜಿಲ್ಲೆಯ ಗ್ರಾಮವೊಂದರಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕಳೆದ ತಿಂಗಳು ಸೋಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಪ್ರಕರಣ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಯ ಪ್ರಿನ್ಸಿಪಾಲ್ ಮಲಕಪ್ಪ ಬಿರಾದಾರ್ ಹಾಗೂ ನಿಲಯ ಪಾಲಕ ಜಾವೇದ್ ಪಟೇಲ್ ಅವರಿಗೆ ಕರ್ತವ್ಯ ಲೋಪದ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ.
ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯು ಗರ್ಭಿಣಿಯಾಗಿ ಹೆರಿಗೆ ಆಗುವ ತನಕ ಯಾರೊಬ್ಬರೂ ಆಕೆಯ ಕುರಿತು ಗಮನಹರಿಸಿಲ್ಲ. ಆಕೆಯ ಚಲನ ವಲನಗಳನ್ನು ಅವಲೋಕಿಸಿಲ್ಲ. ಇದು ಪ್ರಿನ್ಸಿಪಾಲರು ಮತ್ತು ಪಾಲಕರ ನಿರ್ಲಕ್ಷ್ಯತನದಿಂದ ಆದ ಘಟನೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ನವೀನಕುಮಾರ್ ರಾಜು ಅವರು ಕರ್ನಾಟಕ ನಾಗರಿಕ ಸೇವಾ ವರ್ಗಿಕರಣ ನಿಯಂತ್ರಣ ಮತ್ತು ಮೇಲ್ಮನವಿ ನಿಯಮಾವಳಿ 1957ರ ನಿಯಮ 10(1)(ಡಿ) ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನಿಯಮಗಳು 2011ರ ಶೆಡ್ಯೂಲ್ 3ರಂತೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತುಗೊಳಿಸಿದ್ದಾರೆ.
ಪ್ರಿನ್ಸಿಪಾಲ್ ಹಾಗೂ ನಿಲಯ ಪಾಲಕರ ಅಮಾನತು ಸಂಗತಿ ತಿಳಿಯುತ್ತಿದ್ದಂತೆಯೇ ವಸತಿ ಶಾಲೆಯ ವಿದ್ಯಾರ್ಥಿಗಳು ಶಾಲೆಯ ದ್ವಾರದ ಮುಂದೆ ಅಮಾನತು ವಿರೋಧಿಸಿ ಹಾಗೂ ಅಮಾನತುಗೊಳಿಸಿದ ಪ್ರಿನ್ಸಿಪಾಲ್ ಹಾಗೂ ನಿಲಯ ಪಾಲಕರಿಗೆ ಮರು ನಿಯುಕ್ತಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಸಂಗತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತಹಸಿಲ್ದಾರ್ ಸಂಜೀವಕುಮಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ್ ನಾಯಕ್ ಅವರು ಭೇಟಿ ನೀಡಿ, ವಿದ್ಯಾರ್ಥಿಗಳ ಅಹವಾಲುಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾತನಾಡಿ, ನಮ್ಮ ವಸತಿ ಶಾಲೆಯಲ್ಲಿ ಪ್ರಿನ್ಸಿಪಾಲರು ಮತ್ತು ನಿಲಯ ಪಾಲಕರು ಬಹಳ ಒಳ್ಳೆಯವರಿದ್ದಾರೆ. ಅವರು ಏನೂ ತಪ್ಪು ಮಾಡಿಲ್ಲ. ಯಾವ ಕಾರಣಕ್ಕಾಗಿ ಅವರಿಗೆ ಅಮಾನತು ಮಾಡಿದ್ದೀರಿ ಎನ್ನುವುದನ್ನು ನಮಗೆ ತಿಳಿಸಬೇಕು. ಮೇಲಾಧಿಕಾರಿಗಳು ಸ್ಥಳಕ್ಕೆ ಬರುವ ತನಕ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ಪರೀಕ್ಷೆಯನ್ನೂ ಬರೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಆಗ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ದೂರವಾಣಿ ಮೂಲಕ ಅಧಿಕಾರಿಗಳು ಮಾತನಾಡಿಸಿದರು. ಸೋಮವಾರ ವಸತಿ ಶಾಲೆಗೆ ಜಂಟಿ ನಿರ್ದೇಶಕರು ಭೇಟಿ ನೀಡಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುವುದರ ಜೊತೆಗೆ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಡುವುದಾಗಿ ಅವರು ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ತಮ್ಮ ಪ್ರತಿಭನೆಯನ್ನು ಕೈಬಿಟ್ಟು ತರಗತಿ ಕೋಣೆಗಳತ್ತ ತೆರಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ ಭೀಮಾಶಂಕರ್ ಬಿರಾದಾರ್, ಸಿಬ್ಬಂದಿ ಭೀಮಶಾ, ಪ್ರಭಾರಿ ಪ್ರಿನ್ಸಿಪಾಲ್ ಮಲ್ಲಿಕಾರ್ಜುನ್ ನಡುವಿನಕೇರಿ, ಪ್ರಭಾರಿ ನಿಲಯ ಪಾಲಕ ರಾಜಶೇಖರ್ ಕುಂಬಾರ್, ಎಎಸ್ಐ ದಯಾನಂದ್ ಗುಣಾರಿ ಅವರೂ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರೂ ಸಹ ಉಪಸ್ಥಿತರಿದ್ದರು.
ಕೃತ್ಯ ಎಸಗಿದ ಯುವಕನ ಬಂಧನ
ಘಟನೆ ಸಂಬಂಧ ಬಾಲಕಿಯ ದೊಡ್ಡಪ್ಪನ ಪುತ್ರನೇ ಕೃತ್ಯ ಎಸಗಿರುವುದು ಪೋಲಿಸರ ತನಿಖೆಯಲ್ಲಿ ಬಹಿರಂಗಗೊಂಡಿದೆ. ಶಾಲೆಗೆ ರಜೆ ಇದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಯು ತನ್ನ ಮನೆಗೆ ಬಂದಾಗ ದೊಡ್ಡಪ್ಪನ ಮಗ ಆಕೆಯನ್ನು ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ. ಹೀಗೆ ಕಳೆದ ಮಾರ್ಚ್ನಿಂದ ವಿದ್ಯಾರ್ಥಿನಿ ಹಲವು ಬಾರಿ ಆರೋಪಿಯಿಂದ ಅತ್ಯಾಚಾರಕ್ಕೆ ಒಳಗಾಗಿರುವ ಕುರಿತು ಪೋಲಿಸರು ತನಿಖೆಯಲ್ಲಿ ಬಾಲಕಿ ಬಹಿರಂಗಪಡಿಸಿದ್ದಾಳೆ ಎಂದು ತಿಳಿದು ಬಂದಿದೆ. ವಿಚಾರವನ್ನು ಬಾಯಿ ಬಿಟ್ಟರೆ ಕೊಲೆ ಮಾಡುವ ಬೆದರಿಕೆ ಆರೋಪಿ ಹಾಕಿದ್ದರಿಂದ ಆಕೆ ಅತ್ಯಾಚಾರದ ಸಂಗತಿಯನ್ನು ಮನೆಯವರಿಗೂ ವಿಷಯ ತಿಳಿಸಿರಲಿಲ್ಲ ಎಂಬ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ.