ಕಲಬುರಗಿ: ಅತ್ಯಾಚಾರಕ್ಕೊಳಗಾದ ಬಾಲಕಿ ಆಸ್ಪತ್ರೆಯಲ್ಲಿ ಮೃತ್ಯು; ಆರೋಪಿಯ ವಿರುದ್ಧ ಪೊಕ್ಸೊ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ (PTI)
ಕಲಬುರಗಿ: ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.
ಮೃತ ಬಾಲಕಿಯನ್ನು ಕಲಬುರಗಿ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನಗರದ ಬಲಂದ್ ಫರ್ವೆಝ್ ಕಾಲನಿಯ ಸರ್ಫರಾಜ್ (30) ಎಂದು ತಿಳಿದುಬಂದಿದೆ. ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಗೆ ಕ್ರಮವಹಿಸಿದ್ದಾರೆ.
ಮೃತ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ದಲಿತ ಸೇನೆಯ ಕಾರ್ಯಕರ್ತರು ನಗರದ ಕೆಬಿಎನ್ ಆಸ್ಪತ್ರೆ ಎದುರಿನ ಮುಖ್ಯ ರಸ್ತೆಯನ್ನು ತಡೆದು ಧರಣಿ ನಡೆಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ನೀಡಿದ ಹೈಡೋಸ್ ಔಷಧಿಯಿಂದ ಮೃತಪಟ್ಟಿದ್ದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ನಗರ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತರಾದ ಕನೀಕಾ ಶಿಕ್ರೆವಾಲ್ ಮಾಹಿತಿ ನೀಡಿದ್ದಾರೆ.
ವಿವರ: ಆರೋಪಿ ಸರ್ಫರಾಜ್ ಪ್ರತಿದಿನ ಬಾಲಕಿಗೆ ಚುಡಾಯಿಸುತ್ತಿದ್ದ ಎನ್ನಲಾಗಿದ್ದು, ಈ ಬಗ್ಗೆ ಆತನಿಗೆ ಬಾಲಕಿಯ ಕುಟುಂಬದವರು ಬುದ್ಧಿವಾದ ಹೇಳಿದ್ದರೂ ತನ್ನ ಚಾಳಿಯನ್ನು ಆತ ಮುಂದುವರಿಸಿದ್ದ ಎನ್ನಲಾಗಿದೆ. ಜೂ.27(ಗುರುವಾರ)ರಂದು ಬಾಲಕಿಗೆ ತೀವ್ರ ಹೊಟ್ಟೆ ನೋವು ಮತ್ತು ಉಸಿರಾಟ ತೊಂದರೆ ಕಾಣಿಸಿಕೊಂಡಿರುವ ಪರಿಣಾಮ ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ವೇಳೆ ಬಾಲಕಿ 8 ತಿಂಗಳ ಗರ್ಭಿಣಿ ಎಂದು ಗೊತ್ತಾಗಿದ್ದು, ಬಾಲಕಿಯನ್ನು ಈ ಕುರಿತು ವಿಚಾರಿಸಿದಾಗ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಸರ್ಫರಾಜ್ ಮನೆಗೆ ಬಂದು ಹೆದರಿಸಿ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ಬಾಲಕಿ ತಿಳಿಸಿದ್ದಾಳೆ ಎನ್ನಲಾಗಿದೆ. ಮೃತ ಬಾಲಕಿಯ ತಾಯಿ ಈ ಕುರಿತು ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮೃತ ಬಾಲಕಿಯ ವೈದ್ಯಕೀಯ ಪರೀಕ್ಷೆ ವರದಿ ಬಂದ ಮೇಲೆ ಬಾಲಕಿಯ ಸಾವಿಗೆ ನಿಖರ ಕಾರಣ ತಿಳಿಯುತ್ತದೆ. ಮಲ್ಟಿಆರ್ಗನ್ ಸಮಸ್ಯೆಯಿಂದ ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದ್ದು, ಆರೋಪಿಯ ವಿರುದ್ಧ ಪೊಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು.
- ಕನೀಕಾ ಶಿಕ್ರೆವಾಲ್, ಉಪ ಪೊಲೀಸ್ ಆಯುಕ್ತರು, ಕಲಬುರಗಿ