ಕಲಬುರಗಿ: ಮೊರಾರ್ಜಿ ದೇಸಾಯಿ ಶಾಲೆಯ 15 ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಕಲಬುರಗಿ, ಜೂ.29: ಜೇವರ್ಗಿ ಪಟ್ಟಣದ ಓಂ ನಗರ ಬಡಾವಣೆಯ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ 15 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಬೆಳಗ್ಗಿನ ಉಪಾಹಾರ ಸೇವಿಸಿದ ಬಳಿಕ ಮಕ್ಕಳಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಶನಿವಾರ ಬೆಳಗ್ಗೆ ಉಪಹಾರದ ನಂತರ ಏಕಾಏಕಿ 15 ವಿದ್ಯಾರ್ಥಿನಿಯರು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ವಿದ್ಯಾರ್ಥಿನಿಯರನ್ನು ಜೇವರ್ಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಫುಡ್ ಪಾಯಿಸನ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ವಸತಿ ಶಾಲೆಯ ಪ್ರಾಂಶುಪಾಲರ ಮತ್ತು ವಾರ್ಡನ್ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಪ್ರಭು ದೊರೆ ಭೇಟಿ ನೀಡಿದ್ದು, ವಸತಿ ನಿಲಯದ ಆಹಾರದ ಗುಣಮಟ್ಟ ಪರೀಕ್ಷಿಸಿ, ತಪ್ಪಿದ್ದಲ್ಲಿ ಹಾಸ್ಟೆಲ್ ವಾರ್ಡನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಾಜಿ ಶಾಸಕ ಹಾಗೂ ರಾಜ್ಯ ಜೆಡಿಎಸ್ ಕಾರ್ಯಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಜೇವರ್ಗಿ ಪಿಎಸ್ಸೈ ಸಂಗಮೇಶ ಅಂಗಡಿ, ತಾಲೂಕು ವೈದ್ಯರು, ಶಿಕ್ಷಕರ ವೃಂದವರು ಇದ್ದರು.
-------------------------------------------
''ವಸತಿ ಶಾಲೆಯ 12 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, 5 ವಿದ್ಯಾರ್ಥಿಗಳು ಗುಣಮುಖರಾಗಿ ಶಾಲೆಗೆ ಮರಳಿದ್ದಾರೆ. 7 ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿ ನಿಗಾ ವಹಿಸಲಾಗುತ್ತಿದೆ. ಕೊಳವೆಬಾವಿ ನೀರು ಕುಡಿದಿರುವುದರಿಂದ ಅಸ್ವಸ್ಥರಾಗಿರುವುದಾಗಿ ಪ್ರಾಂಶುಪಾಲರು ತಿಳಿಸಿದ್ದಾರೆ. ವಸತಿ ಶಾಲೆಯ ಆಹಾರ ಮತ್ತು ನೀರಿನ ಗುಣಮಟ್ಟವನ್ನು ಪರಿಶೀಲಿಸಿ ತಪ್ಪಿತಸ್ಥ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು.''
- ಪ್ರಭು ದೊರೆ ಜಿಲ್ಲಾ ಅಧಿಕಾರಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಲಬುರಗಿ