ಕಲಬುರಗಿ | 'ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ' ಎಂದು ಶೋರೂಂಗೆ ಬೆಂಕಿ ಇಟ್ಟ ಯುವಕ
ಬೆಂಕಿ ಅವಘಡ ಪ್ರಕರಣಕ್ಕೆ ತಿರುವು
ಕಲಬುರಗಿ : ಎಲೆಕ್ಟ್ರಿಕ್ ಬೈಕನ್ನು ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಅಸಮಾಧಾನಗೊಂಡ ವ್ಯಕ್ತಿಯೊಬ್ಬ ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಬೆಂಕಿ ಇಟ್ಟಿರುವ ಘಟನೆ ನಗರದ ಹುಮನಾಬಾದ್ ರಿಂಗ್ ರೋಡ್ ಪ್ರದೇಶದಲ್ಲಿ ಮಂಗಳವಾರ ನಡೆದಿದ್ದು, ಬುಧವಾರ ಆರೋಪಿಯನ್ನು ಬಂಧಿಸಲಾಗಿದೆ.
ನಗರದ ಯದ್ದುಲ್ಲಾಹ ಕಾಲೋನಿಯ ನಿವಾಸಿ ಮುಹಮ್ಮದ್ ನದೀಮ್ ಶೋರೂಂಗೆ ಬೆಂಕಿ ಇಟ್ಟ ಆರೋಪಿ ಎಂದು ತಿಳಿದು ಬಂದಿದೆ. ಆರೋಪಿ ನದೀಮ್ ತನ್ನ ಹೊಸ ಓಲಾ ಎಲೆಕ್ಟ್ರಿಕ್ ಬೈಕ್ ರಿಪೇರಿಗಾಗಿ ಮೂರು ನಾಲ್ಕು ಬಾರಿ ಶೋರೂಂಗೆ ಅಲೆದಾಡಿದ್ದು, ಸರಿಯಾಗಿ ಬೈಕ್ ರಿಪೇರಿ ಆಗಿಲ್ಲ ಎಂದು ಅಸಮಾಧಾನಗೊಂಡು ಮಂಗಳವಾರ ಬೆಳಿಗ್ಗೆ ಶೋರೂಂ ಓಪನ್ ಆಗುವ ಮುನ್ನವೇ ಶೋರೂಂಗೆ ಬೆಂಕಿ ಹಚ್ಚಿರುವುದಾಗಿ ಸ್ವತಃ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳವಾರ ಬೆಂಕಿ ಅವಘಡದಿಂದ ಅರು ಎಲೆಕ್ಟ್ರಿಕ್ ಬೈಕ್, ಲ್ಯಾಪ್ಟಾಪ್, ಎಸಿ, ಫ್ಯಾನ್ ಸೇರಿದಂತೆ ಇತರೆ ವಸ್ತುಗಳು ಸುಟ್ಟು ಕರಕಲಾಗಿ ಅಪಾರ ಹಾನಿ ಸಂಭಿಸಿದೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬುಧವಾರ ಈ ಘಟನೆಗೆ ಹೊಸ ತಿರುವು ಸಿಕ್ಕಿದೆ.
ಈ ಕುರಿತು ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.