ಕಲಬುರಗಿ | ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತು ದ್ವೇಷ ಭಾಷಣ : ಯತಿ ನರಸಿಂಹಾನಂದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ : ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವ ಉತ್ತರಪ್ರದೇಶದ ಯತಿ ನರಸಿಂಹಾನಂದ ಸರಸ್ವತಿ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದ ಮುಸ್ಲಿಂ ಚೌಕ್ ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.
ಇಲ್ಲಿನ ರಜಾ ಅಕಾಡೆಮಿ ಅಶ್ರಯದಡಿಯಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ಧಾರ್ಮಿಕ ಗುರುಗಳು, ಮುಖಂಡರು ಸೇರಿದಂತೆ ಹಲವರು ಭಾಗವಹಿಸಿದ್ದರು. ಪೈಗಂಬರ್ ಅವರ ಕುರಿತಾಗಿ ಕೆಟ್ಟದಾಗಿ ಮಾತನಾಡಿರುವುದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಒಂದು ವೇಳೆ ನರಸಿಂಹಾನಂದ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಲಬುರಗಿ ಬಂದ್ ಮಾಡಿ ಬೃಹತ್ ಪ್ರತಿಭಟನೆಗೆ ಕರೆ ನೀಡಬೇಕಾಗುತ್ತದೆ ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಖಯ್ಯಾಮ್ ಅಲಿ ಪಂಜಾ, ಮುಹಮ್ಮದ್ ರಯಿಸ್, ಮುಫ್ತಿ ಜೀಶಾನಿ, ಖಲೀಲ್ ಖರಾಡಿ, ಸಯ್ಯದ್ ಹುಸೈನ್ ರಜ್ವಿ, ಸೋಫಿಯಾನ್ ರಜ್ವಿ, ಸಯ್ಯದ್ ಅಜರ್ ಅಲಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.