ಕಲಬುರಗಿ | ಪಿಡಿಒ ಪರೀಕ್ಷೆಯಲ್ಲಿ ಅಕ್ರಮ ಆರೋಪ : ಮರುಪರೀಕ್ಷೆಗೆ ಆಗ್ರಹ
ಕಲಬುರಗಿ : ನ.17ರಂದು ಕೆಪಿಎಸ್ಸಿಯಿಂದ ನಡೆಸಿದ್ದ ಕಲ್ಯಾಣ ಕರ್ನಾಟಕ ವೃಂದದ 97 ಪಿಡಿಒ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಕೂಡಲೇ ಮರುಪರೀಕ್ಷೆ ನಡೆಸಬೇಕೆಂದು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಸೇರಿದಂತೆ ಮತ್ತಿತರ ಸಂಘಟನೆಗಳು ಆಗ್ರಹಿಸಿವೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಪಿಡಿಒ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದರು.
ರಾಯಚೂರಿನ ಪರೀಕ್ಷಾ ಕೇಂದ್ರ ವೊಂದರಲ್ಲಿ ಇದ್ದ 24 ಅಭ್ಯರ್ಥಿಗಳಲ್ಲಿ 12 ಜನ ಅಭ್ಯರ್ಥಿಗಳಿಗೆ ಮಾತ್ರ ಪ್ರಶ್ನೆಪತ್ರಿಕೆ ಕೊಟ್ಟಿದ್ದು, ಉಳಿದ 12 ಮಂದಿಗೆ ಒಂದು ಗಂಟೆಯ ಬಳಿಕ ಪತ್ರಿಕೆ ನೀಡಿದ್ದಾರೆ. ಈ ಬಗ್ಗೆ ಖಂಡಿಸಿ, ನೂರಾರು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಆದರೆ ಈ ಕುರಿತು ತನಿಖೆ ನಡೆಸದೆ, ಪ್ರತಿಯಾಗಿ ಅಭ್ಯರ್ಥಿಗಳ ವಿರುದ್ಧವೇ ಪ್ರಕರಣ ದಾಖಲಿಸಿರುವುದು ದುರಂತ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಈ ಪರೀಕ್ಷೆಯ ಅಕ್ರಮ ಕುರಿತಾಗಿ ತನಿಖೆ ನಡೆಸದೆ ಇದ್ದರೆ, ಮತ್ತು ಶೀಘ್ರದಲ್ಲೇ ಮರು ಪರೀಕ್ಷೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ಪ್ರತಿಭಟನಾನಿರತರು ತಿಳಿಸಿದರು.
ಪ್ರತಿಭಟನೆಯಲ್ಲಿ ಪೃಥ್ವಿರಾಜ್ ಬೋಧನಕರ್, ಸುಜಾತ, ನವಿತ್ರ ವಸ್ತ್ರದ್, ಸಲ್ಮಾನ್ , ಭರತ್ ಕುಮಾರ್, ಹುಲಿಗೆಮ್ಮ, ಪ್ರೇಮದಾಸ, ನಾಗಮ್ಮ ಸೇರಿದಂತೆ ಮತ್ತಿತರರು ಇದ್ದರು.