ಕಲಬುರಗಿ | ಶಾಲಾ ವಾಹನದ ಮೇಲ್ಭಾಗಕ್ಕೆ ತಗುಲಿದ ವಿದ್ಯುತ್ ತಂತಿ : ಮಹಿಳೆಗೆ ತೀವ್ರ ಗಾಯ
ಕಲಬುರಗಿ : ಶಾಲಾ ವಾಹನವೊಂದಕ್ಕೆ ವಿದ್ಯುತ್ ತಂತಿ ತಗುಲಿದ ಪರಿಣಾಮ ವಾಹನ ಸ್ಪರ್ಶಿಸಿದ ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿದ್ದು, ವಾಹನದಲ್ಲಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ಮೋಹನ್ ಲಾಡ್ಜ್ ಸಮೀಪದಲ್ಲಿ ನಡೆದಿರುವುದು ವರದಿಯಾಗಿದೆ.
ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಮಾಲವಾಡಿ ನಗರದ ನಿವಾಸಿ ಭಾಗ್ಯಶ್ರೀ ರವೀಂದ್ರಕುಮಾರ್ (36) ಗಾಯಾಳು ಮಹಿಳೆ ಎಂದು ಗುರುತಿಸಲಾಗಿದೆ. ಇನ್ನುಳಿದಂತೆ ವಾಹನದಲ್ಲಿದ್ದ 11 ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳೆ ತನ್ನ ಮಗನ್ನು ಶಾಲೆಗೆ ಕಳುಹಿಸುವ ವೇಳೆ ಶಾಲಾ ವಾಹನಕ್ಕೆ ಹತ್ತಿಸಲು ಹೋದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ವಾಹನದ ಮೇಲ್ಭಾಗಕ್ಕೆ ವಿದ್ಯುತ್ ತಂತಿ ತಗುಲಿದ್ದು, ಅದೇ ವೇಳೆಯಲ್ಲೇ ಮಹಿಳೆ ಶಾಲಾ ವಾಹನವನ್ನು ಸ್ಪರ್ಶಿಸಿದಾಗ ಶಾಕ್ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಮಹಿಳೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.