ಕಲಬುರಗಿ | ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯಿಂದ ಪ್ರತಿ ಟನ್ ಗೆ 2,700 ರೂ. ದರ ನಿಗದಿ: ಪಾಟೀಲ್
ಕಲಬುರಗಿ : ಆಳಂದ ತಾಲೂಕಿನ ಭೂಸನೂರ ಗ್ರಾಮದ ಹತ್ತಿರ ಇರುವ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ, ಪ್ರತಿ ಟನ್ ಗೆ 2700 ರೂ. ದರ ನಿಗದಿ ಮಾಡಲಾಗಿದೆ ಎಂದು ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗಜoಗಮ ಎಸ್.ಪಾಟೀಲ್ ಧಂಗಾಪೂರ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕಬ್ಬು ನುರಿಸುವ ಮೊದಲೇ ಪ್ರತಿ ಟನ್ ಗೆ 3 ಸಾವಿರ ದರ ನಿಗದಿ ಮಾಡುವಂತೆ ಆಡಳಿತ ಮಂಡಳಿಯವರಿಗೆ ಅಗ್ರಹಿಸಿದ್ದೇವೆ, ಕಬ್ಬು ಕಡಿಯುವಾಗ ಲಾರಿ ಚಾಲಕರು, ಹಾಗೂ ಕಾರ್ಮಿಕರು ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದ್ದು, ಈ ನಿಟ್ಟಿನಲ್ಲಿ ಎನ್ಎಸ್ಎಲ್ ಕಾರ್ಖಾನೆಯ ಮುಖ್ಯಸ್ಥರು ಪತ್ತೆ ಹಚ್ಚಿ ಅವರ ಮೇಲೆ ಕ್ರಮ ಜರುಗಿಸಿ ಇದಕ್ಕೆ ಕಡಿವಾಣ ಹಾಕಬೇಕು ಮತ್ತು ಕಾರ್ಖಾನೆಗೆ ಕಬ್ಬು ಪೂರೈಸಿದ ಮೊದಲಿನ ರೈತರಿಗೆ 2,650 ರೂ. ಹಣ ಖಾತೆಗೆ ಜಮಾ ಮಾಡಿದ್ದು, ಉಳಿದ ಪ್ರತಿ ಟನ್ನಿಗೆ 50 ರೂ. ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಹಾಗೂ ಆಡಳಿತ ಮಂಡಳಿಯವರ ಮನವಿಗೆ ಸ್ಪಂದಿಸಿರುವುದರಿಂದ ಕಾರ್ಖಾನೆಯ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರು ರೈತರ ಪರವಾಗಿ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯ ಮುಖ್ಯಸ್ಥರಿಗೆ ಅಭಿನಂದನೆ ಸಲ್ಲಿಸಿದ್ದಾರೆ.