ಕಲಬುರಗಿ | ಜ.12 ರಿಂದ ಕೂಡಲಸಂಗಮದಲ್ಲಿ 38ನೇ 'ಶರಣ ಮೇಳ' : ಆರ್.ಜಿ.ಶೆಟಗಾರ
ಕಲಬುರಗಿ : 862ನೇ ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಬಸವ ಧರ್ಮ ಪೀಠ ಹಾಗೂ ರಾಷ್ಟ್ರೀಯ ಬಸವದಳ ವತಿಯಿಂದ ಕೂಡಲಸಂಗಮದಲ್ಲಿ ಜ.12 ರಿಂದ 14ರವರೆಗೆ 38ನೇ ಶರಣ ಮೇಳ ನಡೆಯಲಿದೆ ಎಂದು ರಾಷ್ಟ್ರೀಯ ಬಸವ ದಳ ಅಧ್ಯಕ್ಷರಾದ ಆರ್.ಜಿ.ಶೆಟಗಾರ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.12 ರಂದು ಬೆಳಗ್ಗೆ ರಾಷ್ಟ್ರೀಯ ಬಸವದಳ ಅಧಿವೇಶನದಲ್ಲಿ ಸಂಜೆ ಮಹಿಳಾಗೋಷ್ಠಿ ಜರಗುಲಿದೆ. ಜ.13ರ ಬೆಳಿಗ್ಗೆ 10.30ಕ್ಕೆ 38ನೇ ಶರಣ ಮೇಳವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಷಟಸ್ಥಲ ಧ್ವಜಾರೋಹಣವನ್ನು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಾಡುವರು. ಈ ವೇಳೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಗಲಕೋಟೆ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಉಪಸ್ಥಿತರಿರುವರು. ಇದೇ ಸಮಯದಲ್ಲಿ ಬೀದರ್ ಲೋಕಸಭಾ ಸದಸ್ಯ ಸಾಗರ ಖಂಡ್ರೆಗೆ ಸತ್ಕರಿಸಲಾಗುವುದು ಎಂದರು.
ರಾಷ್ಟ್ರೀಯ ಮಟ್ಟದ ಬಸವಾತ್ಮಜಿ ಪ್ರಶಸ್ತಿಯನ್ನು ಕಲಬುರಗಿಯ ಖ್ಯಾತ ಕ್ಯಾನ್ಸರ್ ವೈದ್ಯರಾದ ಡಾ.ವಿಜಯಲಕ್ಷ್ಮೀ ದೇಶಮಾನೆ ಹಾಗೂ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿಯನ್ನು ಮಾಜಿ ಸಚಿವ ಎಸ್.ಆರ್.ಪಾಟೀಲ್, ವೈದ್ಯ ರತ್ನ ಪ್ರಶಸ್ತಿಯನ್ನು ಇಳಕಲ್ ಡಾ.ಮಹಾಂತೇಶ ಕಡಪಟ್ಟಿಯವರಿಗೆ ಮತ್ತು ರಾಷ್ಟ್ರೀಯ ಮಟ್ಟದ ಕೃಷಿ ಪ್ರಶಸ್ತಿಯನ್ನು ಚಿತ್ರದುರ್ಗದ ರೈತ ಮುಖಂಡ ಬಸವರೆಡ್ಡಿ ಚಳ್ಳಕೇರಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಸಿ.ಹರೀಶ, ವಿಧಾನ ಪರಿಷತ್ ಸದಸ್ಯ ರವಿಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಲೋಕಾಯುಕ್ತ ಅಧಿಕಾರಿ ಬಿ.ಎಸ್.ಪಾಟೀಲ್, ಬೆಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೆಕರ ಭಾಗವಹಿಸಲಿದ್ದಾರೆ.
ಜ.14ರ ಬೆಳಿಗ್ಗೆ 10.30ಕ್ಕೆ ಸಮುದಾಯ ಪ್ರಾರ್ಥನೆ ಮತ್ತು ವಚನ ಪಠಣ ಸಮಾರಂಭವನ್ನು ಸಂಸದ ಜಗದೀಶ ಶೆಟ್ಟರ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಮಹೇಶ ಟೆಂಗಿನಕಾಯಿ ಮತ್ತಿತತರು ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಸಾನ್ನಿಧ್ಯವನ್ನು ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತಾಜಿ ವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಪ್ಪ ಲದ್ದೆ, ಆರ್.ಕೆ.ಹೆಗ್ಗಣೆ ಶಾಂತಪ್ಪ ಪಾಟೀಲ, ಹಣಮಂತರಾವ ಪಾಟೀಲ, ಬಸವರಾಜ ಧೂಳಗುಂಡೆ ಇದ್ದರು.