ಕಲಬುರಗಿ: ಬಾಬರಿ ಮಸೀದಿ ಪರ ಪೋಸ್ಟ್ ಹಾಕಿದ ಯುವಕನ ವಿರುದ್ಧ ಪ್ರಕರಣ ದಾಖಲು
ಕಲಬುರಗಿ: ಸಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಾಬರಿ ಮಸೀದಿ ಪರ ಪೋಸ್ಟ್ ಹಾಕಿದ ಯುವಕನ ವಿರುದ್ಧ ಇಲ್ಲಿನ ರಾಘವೇಂದ್ರ ಪೊಲೀಸ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವಕನನ್ನು ನಗರದ ಇಕ್ಬಾಲ್ ಕಾಲೋನಿಯ ನಿವಾಸಿ ಸೈಯದ್ ಮೊಹಿನ್ ಫೈಸಲ್ (23) ಎಂದು ಗುರುತಿಸಲಾಗಿದೆ.
ರಾಮ ಮಂದಿರ ಉದ್ಘಾಟನೆಯ ಮುನ್ನಾದಿನ ಜನವರಿ 21ರಂದು ಸಮಾಜಿಕ ಜಾಲತಾಣ ಎಕ್ಸ್ ನಲ್ಲಿ "ಎಷ್ಟು ಸಮಯ ಕಳೆದರೂ, ಒಂದಲ್ಲ ಒಂದು ದಿನ ಅದೇ ಸ್ಥಳದಲ್ಲಿ ಬಾಬರಿ ಮಸೀದಿ ಕಟ್ಟುತ್ತೇವೆ ಎಂದು ಬಾಬರಿ ಮಸೀದಿ ಮರೆಯಲ್ಲ’ ಎಂಬ ಹ್ಯಾಶ್ ಟ್ಯಾಗ್ ಹಾಕಿ ಪೋಸ್ಟ್ ಮಾಡಿರುವುದನ್ನು ಗಮನಿಸಿದ ಪೊಲೀಸರು ಯುವಕನ ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಯೋಧ್ಯೆಯಲ್ಲಿ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸುತ್ತಿರುವ ವೇಳೆ ಉದ್ದೇಶ ಪೂರ್ವಕವಾಗಿ ಈತ ಒಂದು ಧರ್ಮಕ್ಕೆ ಅವಮಾನ ಮಾಡಿ, ಮತೀಯ ಭಾವನೆಗೆ ಧಕ್ಕೆ ಉಂಟುಮಾಡುವ ಮತ್ತು ಸಮಾಜಿಕ ಸೌಹಾರ್ದತೆ ಹಾಳು ಮಾಡುವ ಉದ್ದೇಶದಿಂದ ಸಮಾಜಿಕ ಜಾಲತಾಣದಲ್ಲಿ ಬಾಬರಿ ಮಸೀದಿ ಪರ ಪೋಸ್ಟ್ ಅಪ್ಲೋಡ್ ಮಾಡಿದ್ದಾನೆ ಎಂದು ಆರೋಪಿಸಿ ಐಪಿಸಿ ಸೆಕ್ಷನ್ 153(ಎ) ,295, 295(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.