ಕಲಬುರಗಿ | ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಭೀಮರಾವ್ ಪ್ರಭು ಸಲಗರ್
ಕಲಬುರಗಿ : ತನ್ನ ಜಮೀನಿನಲ್ಲಿ ಬಿತ್ತಿದ ಬೆಳೆ ಸಂಪೂರ್ಣ ನಾಶವಾಗಿದ್ದಕ್ಕೆ ಮನನೊಂದ ರೈತನೋರ್ವ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ನಡೆದಿದೆ.
ಭೀಮರಾವ್ ಪ್ರಭು ಸಲಗರ್(29) ಮೃತ ರೈತ ಎಂದು ಗುರುತಿಸಲಾಗಿದೆ. ಭೀಮರಾವ್ ಅವರು ಲಕ್ಷಾಂತರ ರೂ. ಸಾಲ ಮಾಡಿಕೊಂಡು 8 ಎಕರೆ 20 ಗುಂಟೆ ಭೂಮಿಯಲ್ಲಿ ತೊಗರಿ, ಉದ್ದು, ಮೆಣಸಿನಕಾಯಿ, ಉಳ್ಳಾಗಡ್ಡಿ ಬೆಳೆಗಳನ್ನು ಬಿತ್ತಿದ್ದು, ಸರಿಯಾದ ಸಮಯಕ್ಕೆ ಬೆಳೆ ಬಾರದೆ ಹಾನಿಯಾಗಿದೆ. ಬ್ಯಾಂಕ್ ಮತ್ತು ಖಾಸಗಿಯಾಗಿ 11.50 ಲಕ್ಷ ರೂ. ಸಾಲ ಪಡೆದುಕೊಂಡಿದ್ದ ಸಲಗರ್, ವಾಪಸು ಹೇಗೆ ತೀರಿಸಬೇಕು ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕುಟುಂಬ ಸಂಕಷ್ಟದಲ್ಲಿದೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕೆಂದು ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಒತ್ತಾಯಿಸಿದ್ದಾರೆ.