ಕಲಬುರಗಿ: ಆಳಂದ ದರ್ಗಾ ಆವರಣದಲ್ಲಿ ಪೂಜೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಕಲಬುರಗಿ: ಇಲ್ಲಿನ ಪ್ರಸಿದ್ಧ ಸೂಫಿ ಸಂತ ಹಜರತ್ ಲಾಡ್ಲೆ ಮಶಾಖ್ (ರ.ಅ) ದರ್ಗಾದ ಆವರಣದಲ್ಲಿದೆ ಎನ್ನಲಾಗುತ್ತಿರುವ ಶ್ರೀರಾಘವ ಚೈತನ್ಯ ಲಿಂಗದ ಪೂಜೆಗಾಗಿ ಅನುಮತಿ ಕೊರಿ ಸಲ್ಲಿಸಿದ ಅರ್ಜಿಯನ್ನು ಜಿಲ್ಲಾ ವಕ್ಫ್ ಟ್ರಿಬ್ಯೂನಲ್ ಕೋರ್ಟ್ ಸೋಮವಾರ ವಜಾ ಗೊಳಿಸಿದೆ.
ಶ್ರೀರಾಮ ಸೇನೆ ರಾಜ್ಯ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮಿ ಅವರು ಮಾರ್ಚ್ 8 ರಂದು ಮಹಾ ಶಿವರಾತ್ರಿ ನಿಮಿತ್ತ ದರ್ಗಾದ ಆವರಣದಲ್ಲಿ ಲಿಂಗದ ಪೂಜೆಗಾಗಿ 100 ಜನರಿಗೆ ಅನುಮತಿ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು.
ಸೋಮವಾರ ಕರ್ನಾಟಕ ವಕ್ಫ್ ಟ್ರಿಬ್ಯೂನಲ್ ಜಿಲ್ಲಾ ನ್ಯಾಯಲಯವು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡು ವಾದ ಪ್ರತಿವಾದ ಆಲಿಸಿ ಸಿಪಿಸಿ ಸೆಕ್ಷನ್ 151 ಅಡಿಯಲ್ಲಿ ಅರ್ಜಿಯನ್ನು ವಜಾಗೊಳಿಸಿದೆ.
ಇತ್ತೀಚೆಗಷ್ಟೇ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರ ಪುತ್ರರಾದ ಹರ್ಷಾನಂದ ಗುತ್ತೇದಾರ ಅವರು ರಥಯಾತ್ರೆ ನಡೆಸಲು ಅನುಮತಿ ನೀಡುವಂತೆ ಸಲ್ಲಿಸಿದ ಅರ್ಜಿ ತಿರಸ್ಕರಿಸಲ್ಪಟ್ಟಿತು. ಇದನ್ನು ಪ್ರಶ್ನಿಸಿ ಮೂವರು ಅರ್ಜಿದಾರರು ಹೈಕೋರ್ಟ್ ಮೊರೆಹೋಗಿದ್ದರು. ಈ ವೇಳೆ ಉಚ್ಛ ನ್ಯಾಯಾಲಯದ ಕಲಬುರಗಿ ಪೀಠವು ಐದು ಷರತ್ತುಗಳನ್ನು ವಿಧಿಸಿ ಮಾರ್ಚ್ 4 ರಂದು ನರೋಣದಿಂದ ನಡೆಸಲಾಗುತ್ತಿರುವ ರಥಯಾತ್ರೆಗೆ ಷರತ್ತುಬದ್ಧಅನುಮತಿ ನೀಡಿತ್ತು.