ಕಲಬುರಗಿ | ಜೀವ ಬೆದರಿಕೆಯೊಡ್ಡಿ ಗ್ರಾಮ ಪಂಚಾಯತ್ ಸದಸ್ಯರಿಬ್ಬರ ಅಪಹರಣ ; ಪ್ರಕರಣ ದಾಖಲು
ಕಲಬುರಗಿ : ಜೀವ ಬೆದರಿಕೆಯೊಡ್ಡಿ ಗ್ರಾಮ ಪಂಚಾಯತ್ ಸದಸ್ಯರಿಬ್ಬರನ್ನು 40 ಜನರಿರುವ ಗುಂಪೊಂದು ಅಪಹರಿಸಿರುವ ಘಟನೆ ಆಳಂದ ತಾಲ್ಲೂಕಿನ ಕೊಡಲಹಂಗಾರಗಾದಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ಸದಸ್ಯರಾದ ಅನಂತ್ ರೆಡ್ಡಿ ಮತ್ತು ರಾಜಶೇಖರ್ ಕಾಂದೆ ಎಂಬಾತರನ್ನು ಅಪಹರಿಸಲಾಗಿದೆ ಎಂದು ತಿಳಿದುಬಂದಿದೆ.
ಹಾಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಲಾಗಿತ್ತು. ಸದಸ್ಯರಾದ ಮಲ್ಲಪ್ಪ ಬಸಪ್ಪ, ರಾಜಶೇಖರ್, ಅನಂತ್ ರೆಡ್ಡಿ, ಸುಭದ್ರಾ ಮಲ್ಲಪ್ಪ, ಇಂದುಬಾಯಿ ರಾಣಪ್ಪ, ವೈಜನಾಥ್ ಶ್ರೀಮಂತ ಮತ್ತಿತರರು ಸೇರಿದಂತೆ ಶಹಾಬಾದ್ ಸಮೀಪದ ತರಿ ತಾಂಡಕ್ಕೆ ಹೋಗಿದ್ದರು ಎನ್ನಲಾಗಿದೆ. ಅಲ್ಲೇ ಇದ್ದ ಅನಿಲ್ ರಾಠೋಡ್ ಎಂಬಾತರ ಮನೆಯಲ್ಲಿ ಇದ್ದಾಗ ಸದಸ್ಯರಿಗೆ ಬೆದರಿಕೆಯೊಡ್ಡಿ ಇಬ್ಬರನ್ನು ಅಪಹರಣ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಹರಿಸಿದ ಆರೋಪದ ಮೇರೆಗೆ 40 ಜನರ ಗುಂಪಿನ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಲಹಂಗಾರಗಾ ಗ್ರಾಮ ಪಂಚಾಯತ್ ನಲ್ಲಿ 12 ಸದಸ್ಯರ ಬಲವಿದ್ದು, ಗುರುವಾರ ನಡೆಯಬೇಕಿದ್ದ ಅವಿಶ್ವಾಸ ಮಂಡನೆಯು ಜರುಗಿಲ್ಲ ಎಂದು ತಿಳಿದುಬಂದಿದೆ.