ಕಲಬುರಗಿ | ಜಯದೇವ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೈರು : ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ
ಪ್ರಿಯಾಂಕ್ ಖರ್ಗೆ
ಕಲಬುರಗಿ : ನಗರದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವಿಕೆಗೆ ಕಲಬುರಗಿ ಉಸ್ತುವಾರಿ ಸಚಿವರೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಕಲ್ಯಾಣ ಕರ್ನಾಟಕದ ಅತ್ಯಂತ ವಿಶೇಷ ಹಾಗೂ ಮಹತ್ವದ ಕಾರ್ಯಕ್ರಮವಾದ ಕಲಬುರಗಿಯ ಜಯದೇವ ಹೃದ್ರೋಗ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅತ್ಯಂತ ಉತ್ಸುಕನಾಗಿದ್ದೆ.
ಕಲಬುರಗಿಯ ಉಸ್ತುವಾರಿ ಸಚಿವನಾಗಿ ಮಾತ್ರವಲ್ಲ, ಕಲ್ಯಾಣ ಕರ್ನಾಟಕದ ಮಣ್ಣಿನ ಮಗನಾಗಿ ನನಗೆ ಇದು ವಿಶೇಷವಾದ ದಿನ, ನಮ್ಮ ಭಾಗದ ಅರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿರುವ ಜಯದೇವ ಹೃದ್ರೋಗ ಆಸ್ಪತ್ರೆ ಲೋಕಾರ್ಪಣೆಯಾಗುತ್ತಿರುವುದು ವೈಯುಕ್ತಿಕವಾಗಿ ನನ್ನಲ್ಲಿ ಸಂಭ್ರಮ ಮೂಡಿಸುತ್ತದೆ ಎಂದಿದ್ದಾರೆ.
ಈ ಕಾರ್ಯಕ್ರಮದ ಸಮಯದಲ್ಲೇ ನನಗೆ ಅಲಯನ್ಸ್ ವಿಶ್ವವಿದ್ಯಾಲಯದ ಮತ್ತೊಂದು ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ ಅನಿವಾರ್ಯ ಸಂದರ್ಭ ಇದ್ದ ಕಾರಣ ಕಲಬುರಗಿಗೆ ಬರಲಾಗಲಿಲ್ಲ. ಸ್ವತಃ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ನಾನು ಆಲಯನ್ಸ್ ಯೂನಿವರ್ಸಿಟಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಜಯದೇವ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ನನ್ನ ಗೈರುಹಾಜರಿಗೆ ತಪ್ಪು ಅರ್ಥಗಳನ್ನು ಕಲ್ಪಿಸಬಾರದು ಎಂದು ಸಂದೇಶ ನೀಡಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಗೈರು ಹಾಜರಾಗಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ನಾನೇ ಬೇರೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರಿಗೆ ಹೇಳಿದ್ದೇನೆ, ಅದಕ್ಕಾಗಿ ಅವರು ಈ ಸಮಾರಂಭಕ್ಕೆ ಆಗಮಿಸಿಲ್ಲ ಎಂದು ಹೇಳಿದ್ದರು. ಇದೀಗ ಸಿಎಂ ಮಾತನಾಡಿದ ಬಳಿಕ ಕಾಂಗ್ರೆಸ್ ಕಾರ್ಯಕರ್ತರ ಗೊಂದಲಮಯ ಚರ್ಚೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟೀಕರಣ ನೀಡಿದ್ದಾರೆ.