ಕಲಬುರಗಿ | ಮತದಾನದಿಂದ ದೂರವಾದರೆ ಸಂವಿಧಾನಕ್ಕೆ ಅಪಚಾರ : ಎ.ವ್ಹಿ.ಶ್ರೀನಾಥ್
ರಾಷ್ಟ್ರೀಯ ಮತದಾರರ ದಿನಾಚರಣೆ

ಕಲಬುರಗಿ : ಸದೃಡ ಭಾರತದ ಪ್ರಗತಿಗೆ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡಲು ಮರೆಯಬಾರದು. ಮತದಾನದಿಂದ ದೂರ ಉಳಿಯುವುದೆಂದರೆ ಅದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಪ್ರಭಾರಿ ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾ.ಎ.ವ್ಹಿ.ಶ್ರೀನಾಥ ಹೇಳಿದರು.
ಶನಿವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ ʼರಾಷ್ಟ್ರೀಯ ಮತದಾರರ ದಿನಾಚರಣೆʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರಕಾರವನ್ನು ಆಯ್ಕೆ ಮಾಡುವ ಅಧಿಕಾರ ಜನರಿಗೆ ಇರುವುದರಿಂದ ಉತ್ತಮ ನಾಯಕರನ್ನು ಆಯ್ಕೆ ಮಾಡಲು ತಪ್ಪದೆ ಮತ ಚಲಾಯಿಸಬೇಕಾಗಿರುವುದು ಪ್ರತಿ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಮತದಾನವೇ ಮಹಾದಾನವಾಗಿದ್ದು, ಇದನ್ನು ಯಾವುದೇ ಹಣ, ವಸ್ತುಗಳ ಆಮೀಷಕ್ಕೆ ಒಳಗಾಗಿ ಮತ ಮಾರಾಟ ಮಾಡಬಾರದು. ಉತ್ತಮರನ್ನು ಆಯ್ಕೆ ಮಾಡಲು ನಿಮ್ಮ ಮತವನ್ನು ದಾನ ಮಾಡಬೇಕೆ ಹೊರತು, ಮಾರಾಟವಲ್ಲ ಎಂದು ಎ.ವ್ಹಿ.ಶ್ರೀನಾಥ ಹೇಳಿದರು.
ಲಿಟರಸಿ ಕ್ಲಬ್ ಮೂಲಕ ಅರಿವು ಮೂಡಿಸಿ :
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮಾತನಾಡಿ, ಶಾಲಾ-ಕಾಲೇಜು ಹಂತದಲ್ಲಿ ಎಲೆಕ್ಟೊರಲ್ ಲಿಟರಸಿ ಕ್ಲಬ್ ಸ್ಥಾಪಿಸಲಾಗಿದ್ದು, ಆ ಮೂಲಕ ಮತದಾನ ಮತ್ತು ಚುನಾವಣಾ ಪ್ರಕ್ರಿಯೆ ಬಗ್ಗೆ ವಿದ್ಯಾರ್ಥಿಗಳು ಪಾಲಕ-ಪೋಷಕರಲ್ಲಿ ಹೆಚ್ಚು ಅರಿವು ಮೂಡಿಸಬೇಕು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವೀಪ್ ಚಟುವಟಿಕೆಯಿಂದ ಮತದಾನ ಪ್ರಮಾಣ ಹೆಚ್ಚಳ ಹಾಗೂ ಇತರೆ ಚುನಾವಣಾ ಪದ್ಧತಿಗಳ ಸಮರ್ಪಕ ಅನುಷ್ಟಾನಕ್ಕೆ ಕಲಬುರಗಿ ಜಿಲ್ಲೆಗೆ ಭಾರತ ಚುನಾವಣಾ ಆಯೋಗವು ಬೆಸ್ಟ್ ಎಲೆಕ್ಟೋರಲ್ ಪ್ರ್ಯಾಕ್ಟೀಸ್ ಅವಾರ್ಡ್ ಘೋಷಿಸಿದ್ದು, ಇಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ನವದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಯುವ ಮತದಾರರಿಗೆ ಎಪಿಕ್ ಚೀಟಿ ವಿತರಣೆ :
ಇದೇ ಸಂದರ್ಭದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಂಡ ಯುವ ಮತದಾರರಿಗೆ ಸಾಂಕೇತಿಕವಾಗಿ ಚುನಾವಣಾ ಗುರುತಿನ ಚೀಟಿ ವಿತರಿಸಲಾಯಿತು. ಇದಲ್ಲದೆ 9 ಬಿ.ಎಲ್.ಓ ಗಳಿಗೆ ಉತ್ತಮ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ಬೆಸ್ಟ್ ಬಿ.ಎಲ್.ಓ. ಪ್ರಮಾಣ ಪತ್ರ ಹಾಗೂ ಶಾಲಾ-ಕಾಲೇಜು ಹಂತದಲ್ಲಿನ ಎಲೆಕ್ಟೋರಲ್ ಲಿಟರಸಿ ಕ್ಲಬ್ ಮೂಲಕ ಆಯೋಜಿಸಿದ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಚುನಾವಣಾ ಜಾಗೃತಿ ಗೀತೆ "ನಾ ಭಾರತ" ನುಡಿಸಲಾಯಿತು. ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಅವರು ಸಭಿಕರಿಗೆ ಮತದಾರರ ಪ್ರತಿಜ್ಞೆ ಬೋಧಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಸಹ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಸಿ.ಪಿ.ಓ ಎಸ್.ಎಸ್.ಮಠಪತಿ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಜಾವಿದ್ ಕರಂಗಿ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ, ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ, ಸಹಾಯಕ ಆಯುಕ್ತೆ ಸಾಹಿತ್ಯ, ಕಲಬುರಗಿ ತಹಶೀಲ್ದಾರ್ ಕೆ.ಆನಂದಶೀಲ್, ಚುನಾವಣಾ ತಹಶೀಲ್ದಾರ್ ಪಂಪಯ್ಯ, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ಶಾಲಾ-ಕಾಲೇಜು ಮಕ್ಕಳು, ಸಾರ್ವಜನಿಕರು ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸ್ವಾಗತಿಸಿದರು. ತಾಲೂಕು ಪಂಚಾಯತ್ ಇ.ಓ ಸೈಯ್ಯದ್ ಪಟೇಲ್ ವಂದಿಸಿದರು.