ಕಲಬುರಗಿ | ಮತಾಂತರ ಆರೋಪ, ನರ್ಸ್ ಮನೆಗೆ ನುಗ್ಗಿ ಅನೈತಿಕ ಪೊಲೀಸ್ ಗಿರಿ ; 9 ಮಂದಿ ವಿರುದ್ಧ ಪ್ರಕರಣ ದಾಖಲು
ಕಲಬುರಗಿ : ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿರುವುದಾಗಿ ಆರೋಪಿಸಿ ರಟಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಒಬ್ಬರ ಮನೆಗೆ ನುಗ್ಗಿ ಅನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದ ಮೇಲೆ 9 ಜನರ ವಿರುದ್ಧ ಜಿಲ್ಲೆಯ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿತ್ತಿರುವ ಅಶ್ವಿನಿ ಅವರ ಮನೆಗೆ ಶಂಕರ್ ಚೋಕಾ, ಬಸವರಾಜ್ ತಳವಾರ, ವಿಷ್ಣು ಸಿಗಿ ಗುಂಡು, ಮಲ್ಲಿಕಾರ್ಜುನ್ ಜಮಾದಾರ, ವಿರೇಶ್ ಗಂಗಾಣಿ, ನಿನೋದ ಸಿಗಿ, ಕಲ್ಯಾಣಿ, ವಿಜಯಕುಮಾರ ಸೇರಿದಂತೆ 10-15 ಜನರು ರಾತ್ರಿ 8 ಗಂಟೆಗೆ ಮನೆಗೆ ನುಗ್ಗಿದ್ದು, ಹಿಂದೂ ಜನರನ್ನು ಕ್ರಿಶ್ಚಿಯನ್ ಗೆ ಮತಾಂತರ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ. ಚಪ್ಪಲಿ ಹಾಕಿಕೊಂಡು ಮನೆಯೊಳಗಿನ ಪೂಜಾ ಸ್ಥಳಕ್ಕೆ ನುಗ್ಗಿ, ಕ್ರಿಶ್ಚಿಯನ್ ದೇವರನ್ನು ಪೂಜೆ ಮಾಡುತ್ತಿದ್ದೀರಿ, ಅಂಬಾಭವಾನಿ ಪೋಟೋ ಇಟ್ಟು ಪೂಜೆ ಮಾಡಬೇಕೆಂದು ಹೆದರಿಸಿ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಅಶ್ವಿನಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಮತಾಂತರ ಮಾಡುತ್ತಿರುವ ಬಗ್ಗೆ ಸುಳ್ಳು ಆರೋಪ ಮಾಡಿದ ಆರೋಪಿಗಳು, ರಾತ್ರಿ 10-15 ಜನರೊಂದಿಗೆ ಮನೆಗೆ ನುಗ್ಗಿ ಮಂತಾತರ ಮಾಡುತ್ತಿರುವುದನ್ನು ತಡೆದಿರುವುದಾಗಿ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಅಶ್ವಿನಿ ಆರೋಪಿಸಿದ್ದಾರೆ.
ನಮ್ಮ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೆ ಕೆಲಸದಿಂದ ತೆಗಿಸುತ್ತೇವೆ, ಜೀವ ಸಹಿತ ಬಿಡುವುದಿಲ್ಲ ಎಂದು ಕರ್ತವ್ಯಕ್ಕೆ ತರಳುವ ವೇಳೆ ಅಡ್ಡಿ ಪಡಿಸಿ ಬೆದರಿಕೆ ಹಾಕಿದ್ದಾರೆ ಎಂದು ರಟಕಲ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಅವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯ ಸಂಬಂಧ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.