ಕಲಬುರಗಿ: ಕೈದಿಗೆ ಹಿಂಸೆ ನೀಡಿ ಹಣದ ಬೇಡಿಕೆ ಆರೋಪ; ಜೈಲರ್ ವಿರುದ್ಧ ದೂರು
ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದ ಕೈದಿಯೊಬ್ಬನಿಗೆ ಕಾರಾಗೃಹದ ಅಧೀಕ್ಷಕಿ ಅನಿತಾ .ಆರ್ ಮತ್ತು ಕಾರು ಚಾಲಕ ಶ್ರೀಕಾಂತ ಎಂಬಾತ ಹಣದ ಬೇಡಿಕೆಯಿಟ್ಟು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೈದಿಯ ಕುಟುಂಬಸ್ಥರು ದೇಶದ ಮತ್ತು ರಾಜ್ಯದ ಮುಖ್ಯ ನ್ಯಾಯಾಧೀಶರು ಸೇರಿದಂತೆ ಹಲವರಿಗೆ ದೂರು ನೀಡಿದ್ದಾರೆ.
ಕಾರಾಗೃಹದಲ್ಲಿ ಗುಣಮಟ್ಟದ ಆಹಾರ ಕೇಳಿದ್ದಕ್ಕೆ ಕೈದಿಯನ್ನು ಗುರಿಯಾಗಿಸಿ ಜೈಲಿನಲ್ಲಿ ಹೊಡೆದು ದೈಹಿಕವಾಗಿ ಹಿಂಸಿಸಲಾಗುತ್ತಿದೆ. ಅಲ್ಲದೇ 25 ಸಾವಿರ ರೂ ಹಣದ ಬೇಡಿಕೆ ಇಟ್ಟಿದ್ದು, ಕಾರು ಚಾಲಕ ಮತ್ತು ಕಾರಾಗೃಹದ ಅಧೀಕ್ಷಕರ ಮೊಬೈಲ್ ಗೆ 12 ಸಾವಿರ ರೂ. ಯುಪಿಐ ಮೂಲಕ ಹಣ ವರ್ಗಾಯಿಸಲಾಗಿದೆ. ಉಳಿದ ಹಣಕ್ಕಾಗಿ ಅಧೀಕ್ಷಕರು ಮತ್ತು ಕಾರು ಚಾಲಕ ಇಬ್ಬರು ಸೇರಿ ಹಿಂಸೆ ನೀಡುತ್ತಿದ್ದು, ಹಣ ನೀಡದಿದ್ದರೆ ಮೈಸೂರು, ಬೆಂಗಳೂರು ಅಥವಾ ಮಂಗಳೂರು ಜೈಲಿಗೆ ಶಿಫ್ಟ್ ಮಾಡುವುದಾಗಿ ಬೆದರಿಸಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಮೊಬೈಲ್ ಸಂಭಾಷಣೆ ಆಡಿಯೋದಲ್ಲಿ ಕೈದಿ ಆರೋಪಿಸಿದ್ದು, ಹಣ ನೀಡದಿದ್ದಲ್ಲಿ ಚಿತ್ರಹಿಂಸೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗುವೆ ಎಂದು ಪೋಷಕರ ಎದುರು ಅಳಲು ತೋಡಿಕೊಂಡಿದ್ದಾನೆ. ಹೀಗಾಗಿ ಕಲಬುರಗಿ ಲೋಕಾಯುಕ್ತರ ಕಚೇರಿಗೆ ತೆರಳಿ ದೂರು ನೀಡಲು ಪ್ರಯತ್ನಿಸಿದ್ದು, ಹಿರಿಯ ಅಧಿಕಾರಿಗಳು ಸಿಗಲಿಲ್ಲ. ಸಿಬ್ಬಂದಿ ಒಬ್ಬರು ನಮ್ಮ ಆರೋಪ ಅಲ್ಲಗಳೆದು, ಪೊಲೀಸ್ ಆಯುಕ್ತರಿಗೆ ದೂರು ನೀಡಲು ತಿಳಿಸಿರುವುದಾಗಿ ನೊಂದ ಕೈದಿಯ ಸಹೋದರಿ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಪ್ರತಿ ಹಾಗೂ ಕೈದಿಯು ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ ಆಡಿಯೋ ರೆಕಾರ್ಡ್ ಮತ್ತು ಹಣ ವರ್ಗಾವಣೆಯ ದಾಖಲೆಗಳು ವಾರ್ತಾ ಭಾರತಿಗೆ ಲಭ್ಯವಾಗಿದೆ.
ಆರ್ಥಿಕ ಸಂಕಷ್ಟದ ನಡುವೆಯೂ ಇನ್ನೊಂದಿಷ್ಟು ಸಾಲ ಮಾಡಿ ಹಣ ಹಾಕುವುದಾಗಿ ಫೋನ್ ನಲ್ಲಿ ಕೈದಿಗೆ ಧೈರ್ಯ ತುಂಬಿ, ಹಣ ಹೊಂದಿಸಲು ಸಾಧ್ಯವಾಗದೇ ಮಾನವ ಹಕ್ಕುಗಳ ಆಯೋಗ, ದೇಶದ ಮತ್ತು ರಾಜ್ಯದ ಮುಖ್ಯ ನ್ಯಾಯಾಧೀಶರಿಗೆ ಮತ್ತು ಮುಖ್ಯಮಂತ್ರಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ತನಿಖೆ ನಡೆಸಿ, ಕಾರಾಗೃಹದ ಆಧೀಕ್ಷಕರು ಮತ್ತು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆಡಳಿತಾತ್ಮಕ ತನಿಖೆಗೆ ನಡೆಸಬೇಕು. ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಅಥವಾ ಉಚ್ಛ ನ್ಯಾಯಲಯದ ನ್ಯಾಯಧೀಶರ ನೇತೃತ್ವದಲ್ಲಿ ಹೆಚ್ಚಿನ ತನಿಖೆಗೆ ನಡೆಸಬೇಕೆಂದು ಕೈದಿಯ ಸಹೋದರಿ ಒತ್ತಾಯಿಸಿದ್ದಾರೆ.
ಲೋಕಾಯುಕ್ತ ಕಚೇರಿಗೆ ಹೋಗಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ಪೊಲೀಸ್ ಆಯುಕ್ತರಿಗೆ ದೂರು ನೀಡಿದರೆ ಜೈಲಿನಲ್ಲಿ ಸಹೋದರನಿಗೆ ಹೆಚ್ಚು ತೊಂದರೆ ನೀಡಬಹುದೆಂಬ ಆತಂಕದಿಂದ ದೂರು ನೀಡಿಲ್ಲ. ಪೊಲೀಸರು ತಮ್ಮ ತಪ್ಪು ಮುಚ್ಚುವ ಕೆಲಸಕ್ಕೆ ಮುಂದಾಗುತ್ತಾರೆ. ನಮಂತವರಿಗೆ ಸಹಾಯ ಮಾಡಲ್ಲ. ಆರ್ಥಿಕವಾಗಿ ಸಂಕಷ್ಟ ಇದೆ. ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಜೈಲಿನಲ್ಲಿ ಬಡ ಕೈದಿಗಳಿಗೆ ಹೊಡೆದು ದೈಹಿಕವಾಗಿ ಹಿಂಸೆ ನೀಡುವ ಘಟನೆ ನಡೆಯಬಾರದು.
- ಕಾರಾಗೃಹದಲ್ಲಿ ಹಿಂಸೆಗೆ ಒಳಗಾದ ಕೈದಿಯ ಸಹೋದರಿ.