ಕಲಬುರಗಿ | ಉದ್ಯೋಗ ಸೃಷ್ಠಿಗೆ ಒತ್ತು ನೀಡದ ಯುವಜನ ವಿರೋಧಿ ಬಜೆಟ್ : ಡಿವೈಎಫ್ಐ ಖಂಡನೆ

ಲವಿತ್ರ ವಸ್ತ್ರದ್
ಕಲಬುರಗಿ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಶುಕ್ರವಾರ ಸದನದಲ್ಲಿ ಮಂಡಿಸಿದ 4.09 ಲಕ್ಷ ಕೋಟಿ ರೂ. ಯ 2025-26ನೇ ಸಾಲಿನ ಆಯವ್ಯಯ (ಬಜೆಟ್) ದಲ್ಲಿ ರಾಜ್ಯದ ದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರಿಗೆ ಅತ್ಯಗತ್ಯವಿರುವ ಉದ್ಯೋಗ ಸೃಷ್ಠಿಸಿ, ಉದ್ಯೋಗ ಖಾತ್ರಿಗೊಳಿಸದೇ ಯುವಜನರಿಗೆ ನಿರಾಸೆಯನ್ನು ಮೂಡಿಸಿದ ಬಜೆಟ್ ಆಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಹೇಳಿದೆ.
ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ರಾಜ್ಯದ ಯುವಜನತೆಯು ಮುಖ್ಯಮಂತ್ರಿಗಳು ಉದ್ಯೋಗ ನೀತಿ ಜಾರಿಗೊಳಿಸಿ ಉದ್ಯೋಗ ಭರವಸೆ ನೀಡುತ್ತಾರೆಂದು ಭಾವಿಸಿದ್ದರು, ಆದರೆ ಸಿಎಂ ಸಿದ್ರಾಮಯ್ಯನವರು ಮಂಡಿಸಿದ ದಾಖಲೆಯ 16ನೇ ಬಜೆಟ್ ರಾಜ್ಯದ ಯುವಜನರ ಬದುಕಿನ ಭದ್ರತೆಯ ಕುರಿತು ಯಾವುದೇ ಸ್ಪಷ್ಟ ಕಣ್ಣೋಟ ಹೊಂದಿಲ್ಲ ಎಂಬುದನ್ನು ಸಾಬೀತು ಪಡಿಸಿದೆ ಎಂದು ಸಂಘಟನೆಯ ಸದಸ್ಯರು ಆರೋಪಿಸಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದು ಎಂಬ ಒಂದಂಶ ಹೊರತುಪಡಿಸಿದರೆ, ರಾಜ್ಯ ಸರಕಾರದಡಿ ಖಾಲಿಯಿರುವ ಎರಡು ಲಕ್ಷ ಎಪ್ಪತ್ತು ಸಾವಿರ ಹುದ್ದೆಗಳ ಭರ್ತಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ರಾಜ್ಯಕ್ಕೆ ಅಗತ್ಯವಿರುವ ಯುವ ನೀತಿಯನ್ನೂ ಕೂಡ ಜಾರಿ ಮಾಡಲು ಮುಂದಾಗಿಲ್ಲ. ಇದು ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಯುವಜನರಿಗೆ ಸಹಜವಾಗಿಯೇ ನಿರಾಸೆ ಮೂಡಿಸಿದ ಬಜೆಟ್ ಆಗಿದೆ. ಎಂದು ಸಂಘಟನೆಯ ರಾಜ್ಯ ಅಧ್ಯಕ್ಷೆ ಲವಿತ್ರ ವಸ್ತ್ರದ್ ಹೇಳಿದ್ದಾರೆ.
ಕೇವಲ ತರಬೇತಿ ನೀಡುವ ಬಜೆಟ್ ಪ್ರಸ್ತಾವನೆಗಳು ಯುವಜನರ ಬದುಕಿಗೆ ಭದ್ರತೆ ಖಾತ್ರಿಪಡಿಸುವುದಿಲ್ಲ.
ಉದ್ಯೋಗದ ಖಾತ್ರಿ ನೀಡದೇ ಕೇವಲ ಟ್ರೈನಿಂಗ್ ನೀಡುತ್ತೇವೆಂಬುದು ರಾಜ್ಯ ಸರಕಾರ ಉದ್ಯೋಗಕ್ಕಾಗಿ ಪರದಾಡುತ್ತಿರುವ ಯುವಜನರ ಬದುಕಿನ ಜೊತೆ ಚಲ್ಲಾಟವಾಡಿದಂತಾಗುತ್ತದೆ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಪ್ರಮೋದ ಪಾಂಚಾಳ, ಸಲ್ಮಾನ್ ಖಾನ್, ಗಿಡ್ಡಮ್ಮ ಪವಾರ, ಶಾಂತಕುಮಾರ ಗುಡುಬಾ ಸೇರಿದಂತೆ ಇತರರು ಇದ್ದರು.