ಕಲಬುರಗಿ | ಮೇ 1ರಂದು ಕಾರ್ಮಿಕರಿಗೆ ಅಧಿಕೃತ ರಜೆ ಘೋಷಣೆಗೆ ಮನವಿ

ಕಲಬುರಗಿ : ಮೇ 1 ರಂದು ಕಾರ್ಮಿಕ ದಿನಾಚರಣೆ ನಿಮಿತ್ತ ಸರಕಾರದ ವತಿಯಿಂದ ಅಧಿಕೃತ ರಜೆ ಘೋಷಣೆ ಮಾಡಬೇಕೆಂದು ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ವತಿಯಿಂದ ಕಲಬುರಗಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
ಪ್ರಸ್ತುತ ಸರಕಾರದ ರಜೆ ಕೇವಲ ಸರಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದೆ. ಸರಕಾರಿ ವಲಯಕ್ಕಿಂತಲೂ ಸುಮಾರು ಶೇ.98ರಷ್ಟು ಪ್ರತಿಶತ ಕಾರ್ಮಿಕರು ಖಾಸಗಿ ವಲಯದಲ್ಲಿ ದುಡಿಯುತ್ತಿದ್ದಾರೆ. ಅಂತಹ ಕ್ಷೇತ್ರದ ಕಾರ್ಮಿಕರಿಗೆ ಮೇ-1 ರಂದು ರಜೆ ಸಿಗದೇ ಅನ್ಯಾಯವಾಗುತ್ತಿದೆ. ಕಾರ್ಮಿಕ ಇಲಾಖೆಯಡಿಯಲ್ಲಿ ಬರುವಂತಹ ಎಲ್ಲಾ ಖಾಸಗಿ ಕೈಗಾರಿಕಾ ಮತ್ತು ವ್ಯಾಪಾರ ಕ್ಷೇತ್ರದಲ್ಲಿ, ವಾಣಿಜ್ಯ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರಿಗೂ ಸಹ ಕಡ್ಡಾಯವಾಗಿ ರಜೆ ನೀಡುವಂತೆ ಆದೇಶಿಸಲು ಕಾರ್ಮಿಕ ದಿನಾಚರಣೆಗೆ ಅರ್ಥ ಕಲ್ಪಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಭೀಮರಾಯ ಎಂ. ಕಂದಳ್ಳಿ, ರಾಜು ಜಮಾದಾರ, ಮರೆಪ್ಪ ರತ್ನೊಡಗಿ, ಶಿವುಕುಮಾರ ಬೆಳಿಗೇರಿ, ಮಹಾಂತೇಶ ದೊಡ್ಡಮನಿ, ಶರಣು ಬಳಿಚಕ್ರ,ಚಂದ್ರಕಾಂತ ತುಪ್ಪದಕರ, ಅಣ್ಣಯ್ಯ ಗುತ್ತೇದಾರ, ಮಲ್ಲು ಬೋಳೆವಾಡ, ಮುತ್ತಣ್ಣ ರಾಜಾಪೂರ, ಬಾಬುರಾವ ದೇವರಮನಿ ಮತ್ತಿತರರು ಇದ್ದರು.