ಕಲಬುರಗಿ | ಜೈನ ಸಮುದಾಯಕ್ಕೆ ಸೌಲಭ್ಯ ದೊರಕಿಸಿಕೊಡಲು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಮನವಿ
ಕಲಬುರಗಿ : ಜೈನ ಸಮುದಾಯಕ್ಕೆ ಸರಕಾರದ ಯೋಜನೆಗಳು ಪರಿಣಾಮಕಾರಿಯಾಗಿ ತಲುಪಿಸುವ ದಿಶೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧ್ಯಕ್ಷರಾದ ಯು.ನಿಸಾರ್ ಅಹ್ಮದ್ ಅವರಿಗೆ ಜೈನ್ ಯುವ ವೇದಿಕೆಯಿಂದ ಮನವಿ ಮಾಡಲಾಯಿತು.
ಇತ್ತೀಚೆಗೆ ಕಲಬುರಗಿ ನಗರದಲ್ಲಿ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಕುರಿತು ಸಾರ್ವಜನಿಕ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನವಿ ಸಲ್ಲಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ರಾಜ್ಯದ ಜೈನ ಸಮುದಾಯವು ಅಲ್ಪ ಸಂಖ್ಯಾತರಲ್ಲಿಯೇ ಅತಿ ಅಲ್ಪಸಂಖ್ಯಾತರಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಲ್ಪ ಸಂಖ್ಯಾತರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಕಡು ಬಡವರ ಬದುಕಿನ ಜೀವನಮಟ್ಟ ಸುಧಾರಿಸಲು ಹಲವು ಯೋಜನೆಗಳನ್ನು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಹಾಗೂ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿನಿಗಮದ ಮೂಲಕ ಜಾರಿ ಮಾಡಲಾಗಿದೆ. ಆದರೆ, ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಿ ಸಂವಿಧಾನಾತ್ಮಕವಾಗಿ ಜೈನ ಸಮುದಾಯಕ್ಕೆ ಸಿಗದೆ ವಂಚನೆಯಾಗುತ್ತಿದೆ.
15 ಷರ್ಷಗಳಿಂದ ಇಲಾಖೆ ಮತ್ತು ನಿಗಮದಿಂದ ಜೈನ ಸಮುದಾಯಕ್ಕೆ ಸರಕಾರದ ಯೋಜನೆಗಳು ಪರಿಣಾಮಕಾರಿಯಾಗಿ ತಲುಪಿಸುವ ಕ್ರಮಕೈಗೊಳ್ಳುವಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧ್ಯಕ್ಷರಿಗೆ ಜಿಲ್ಲಾ ಜೈನ್ ಯುವ ವೇದಿಕೆಯಿಂದ ಅಗ್ರಹಿಸಲಾಗಿದೆ.
ಜಾರಿಯಾಗಿರುವ ಯೋಜನೆಗಳ ಕುರಿತು ಸಭೆ ನಡೆಸಿ ಜೈನ ಸಮುದಾಯಕ್ಕೆ ದೊರಕಿರುವ ಸೌಲಭ್ಯಗಳನ್ನು ಪರಾಮರ್ಶೆ ಮಾಡಬೇಕು. ನಗರ ಪ್ರದೇಶ ಹಾಗೂ ಪಟ್ಟಣಗಳಲ್ಲಿ ವಾಸಿಸುವ ಸಮುದಾಯದ ಕೆಲವು ಜನರಿಗೆ ಮಾತ್ರ ಸೌಲಭ್ಯ ದೊಕಿವೆ. ಆದರೆ, ಗ್ರಾಮಾಂತರ ಭಾಗದಲ್ಲಿ ಹಳ್ಳಿಗಳಲ್ಲಿ ವಾಸಿಸುವ ಅರ್ಹ ಫಲಾನುಭವಿಗಳಿಗೆ ಈ ಯೋಜನೆಗಳು ಯಥಾವತ್ತಾಗಿ ತಲುಪುತ್ತಿಲ್ಲ. ಕೆಲ ಕಾನೂನಿನ ತೊಡಕುಗಳು ಮತ್ತು ನಿಯಮ ನಿಬಂಧನೆಗಳಿಂದ ಜೈನ ಸಮುದಾಯದ ಬಡವರು ಯೋಜನೆಗಳಿಂದ ವಂಚಿತರಾಗುತ್ತಿರುವುದು ಕಂಡು ಬರುತ್ತಿದ್ದು, ಕೂಡಲೇ ಈ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಮನವಿಯಲ್ಲಿ ಸಂಘದ ಅಧ್ಯಕ್ಷ ಸುರೇಶ ಎಸ್.ತಂಗಾ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸದ್ದಾಂಹುಸೇನ್ ವಜೀರ್ ಗಾoವ್ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.