ಕಲಬುರಗಿ | ಬೀದಿ ವ್ಯಾಪಾರಿಗಳ ಸಂಘಕ್ಕೆ ನೀಡಿದ ಲೈಸೆನ್ಸ್ ನವೀಕರಣಕ್ಕೆ ಒತ್ತಾಯಿಸಿ ಪಾಲಿಕೆಗೆ ಮನವಿ

ಕಲಬುರಗಿ : ವ್ಯಾಪಾರ ವಲಯಗಳು ಗುರುತಿಸಲಾದ ಸ್ಥಳಗಳಲ್ಲಿ ವಲಯಗಳನ್ನು ಕಟ್ಟಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವಂತೆ ಮತ್ತು ಸಂಘಕ್ಕೆ ನೀಡಿದ ಲೈಸೆನ್ಸ್ ನವೀಕರಣಕ್ಕೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ್ ಎಸ್ ಸೂರ್ಯವಂಶಿ ಅವರು ಮಹಾಪೌರ ಯಲ್ಲಪ್ಪ ನಾಯ್ಯೋಡಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಸಿಂಧೆ ಅವರಿಗೆ ಮನವಿ ಪತ್ರ ಸಲ್ಲಿಸಿ ಮನವಿ ಮಾಡಿದರು.
ಸೂಪರ್ ಮಾರ್ಕೆಟ್ ವ್ಯಾಪ್ತಿಯಲ್ಲಿ ಆಯಾ ಕಡೆ ಬೀದಿ ವ್ಯಾಪಾರ ಮಾಡುವ ಬೀದಿ ವ್ಯಾಪಾರಿಗಳಿಗೆ ಹಳೆಯ ಜೈಲ್ ಗಾರ್ಡನ್ ಸೂಪರ್ ಮಾರ್ಕೆಟ್ ನಲ್ಲಿ ಸ್ಥಳವನ್ನು ನಿಗದಿಪಡಿಸಲಾಗಿದ್ದು, ವ್ಯಾಪಾರ ಮಾಡಿ ಬದುಕಲು ಆದೇಶಿಸಿದ್ದಾರೆ. ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪ, ವ್ಯವಸ್ಥಿತ ಮಳಿಗೆಗಳು ಹಾಗೂ ರಸ್ತೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ನಗರದ ಎಂಎಸ್ಕೆ ಮಿಲ್ ಪ್ರದೇಶದ ಸರ್ಕಾರಿ ಐಟಿಐ ಕಾಲೇಜು ಎದುರು, ಡಂಕಾ ವೃತ್ತದಿಂದ ಪಾಕೀಜಾ ವೈನ್ ಶಾಪ್ವರೆಗೆ, ಹುಮ್ನಾಬಾದ್ ರಸ್ತೆಯಲ್ಲಿನ ಕೆಎಂಎಫ್ ಡೈರಿ ಎದುರುಗಡೆ, ಅಣಕಲ್ ಪೆಟ್ರೋಲ್ ಪಂಪ್ ಎದುರುಗಡೆ, ಪಂಚಶೀಲ ನಗರದ ಹಳೆಯ ಒಳಸೇತುವೆ, ಆಳಂದ್ ಚೆಕ್ ಪೋಸ್ಟ್, ಸೂಪರ್ ಮಾರ್ಕೆಟ್ ಸೇರಿ ಎಲ್ಲ ಏಳು ವಲಯಗಳಲ್ಲಿ ಗುರುತಿಸಲಾಗಿದ್ದು, ಇನ್ನುಳಿದ ಖರ್ಗೆ ಪೆಟ್ರೋಲ್ ಪಂಪ್, ರಾಮ ಮಂದಿರ ಮತ್ತು ಮಿಜಗುರಿ ದರ್ಗಾ, ಹಾಗರಗಾ ಕ್ರಾಸ್ ವಲಯಗಳು ಸೇರಿದಂತೆ ವಲಯಗಳನ್ನು ಅಭಿವೃದ್ಧಿಪಡಿಸಿ ಬೀದಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಂದ್ರಹಾಸ ಚಿತ್ರಿ, ಅಮೃತ ಸಿರನೂರ, ಗನಿಸಾಬ್, ಬಾಬು ಪರಿಟ್ ಮುಂತಾದವರು ಉಪಸ್ಥಿತರಿದ್ದರು.