ಕಲಬುರಗಿ | ಬಾಲಕಿ ಆತ್ಮಹತ್ಯೆ ಪ್ರಕರಣದ ಆರೋಪಿಯ ರಕ್ಷಣೆಗೆ ಯತ್ನ : ಸುಧಾ ಹಾಲಕಾಯಿ ಆರೋಪ
ಕಲಬುರಗಿ : 'ಜೇವರ್ಗಿಯಲ್ಲಿ ನಡೆದ ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಕಾರಣವಾದ ಆರೋಪಿಯನ್ನು ರಕ್ಷಣೆ ಮಾಡಲು ಆತನನ್ನು ಬಾಲಾಪಾರಾಧಿ ಎಂದು ಬಿಂಬಿಸಲಾಗಿದೆ' ಎಂದು ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಡಾ.ಸುಧಾ ಹಾಲಕಾಯಿ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರಮಠ ಕೊಲೆ ಮಾದರಿಯಲ್ಲೆ ಕಲಬುರಗಿ ಅಪ್ರಾಪ್ತ ಬಾಲಕಿ ಕೊಲೆ ನಡೆದಿದೆ. ಬಾಲಕಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡುವಂತೆ ಮಾಡಲಾಗಿದೆ. ಮಹಿಬೂಬ್ ಎಂಬಾತ ಒಬ್ಬ ಆಟೋ ಚಾಲಕನಾಗಿದ್ದು, ಆತನಿಗೆ ಲೈಸೆನ್ಸ್ ಕೂಡ ನೀಡಲಾಗಿದೆ ಎನ್ನಲಾಗುತ್ತಿದೆ. ಆದರೂ ಆತನನ್ನು ಬಾಲಾಪಾರಾಧಿ ಎಂದು ಬಂಧಿಸಲಾಗಿದೆ. ಅಲ್ಲದೆ ಎಫ್ಐಆರ್ ಪ್ರತಿಯಲ್ಲಿ ವಯಸ್ಸಿನ ಕಾಲಂ ಖಾಲಿಯಾಗಿ ಬಿಟ್ಟಿದ್ದಾರೆ. ಇದೆಲ್ಲವೂ ಗಮನಿಸಿದರೆ ಪೋಲಿಸರ ನಡೆ ಸಂಶಯಾಸ್ಪದವಾಗಿದೆ ಎಂದು ದೂರಿದ್ದಾರೆ.
ಈ ಪ್ರಕರಣದಲ್ಲಿ ಕೆಲ ಶಾಸಕರು ಸೇರಿಕೊಂಡು ಮತ್ತಿತರರು ಆರೋಪಿಯನ್ನು ರಕ್ಷಿಸುವ ಭರದಲ್ಲಿ ಇದ್ದಾರೆ, ವೀರಶೈವ ಸಮುದಾಯದ ಅಪ್ರಾಪ್ತ ಬಾಲಕಿಯೊಬ್ಬಳು ಸಾವಿಗೆ ಶರಣಾಗಿದ್ದಾಳೆ, ನಮ್ಮದೇ ಸಮುದಾಯದ ಕೆಲ ಶಾಸಕರು ಪ್ರತಿಕ್ರಿಯಿಸದೆ ಸುಮ್ಮನಿರುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ. ನಮ್ಮ ಸಮುದಾಯದ ಬಾಲಕಿಗೆ ನ್ಯಾಯ ಕೊಡಿಸಲು ಕಾನೂನು ಹೋರಾಟ ಮಾಡುವೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೀರೇಂದ್ರ ರಾಯಕೋಡ, ರಾಜೂಗೌಡ, ಗಿರಿರಾಜ್, ಮಹೇಶ್ ರೆಡ್ಡಿ ಸೇರಿದಂತೆ ಶ್ರೀದೇವಿ ಕೂಡ ಇದ್ದರು.