ಕಲಬುರಗಿ | ನಕಲಿ ಅಂಕಪಟ್ಟಿ ಜಾಲದ ಆರೋಪಿ ರಾಜೀವ್ ಸಿಂಗ್ ಅರೋರಾಗೆ ಜಾಮೀನು ನಿರಾಕರಣೆ

ಆರೋಪಿ ರಾಜೀವ್ ಸಿಂಗ್ ಅರೋರಾ
ಕಲಬುರಗಿ : ನಕಲಿ ಅಂಕಪಟ್ಟಿ ತಯಾರಿಸಿ ವಿತರಣೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸರ ವಶದಲ್ಲಿರುವ ದೆಹಲಿ ಮೂಲದ ಆರೋಪಿ ರಾಜೀವ್ ಸಿಂಗ್ ಅರೋರಾ ಅವರಿಗೆ ಜಾಮೀನು ನೀಡಲು ಇಲ್ಲಿನ 5ನೇ ಹೆಚ್ಚುವರು ವಿಶೇಷ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ.
2020ರ ಜುಲೈ 8 ರಂದು ಖಚಿತ ಮಾಹಿತಿ ಮೇರೆಗೆ ಕಲಬುರಗಿಯ ಸ್ಟೇಷನ್ ಬಜಾರ್ ಆರಕ್ಷಕ ನೀರಿಕ್ಷಕರು ತಮ್ಮ ಸಿಬ್ಬಂದಿಯವರೊಂದಿಗೆ ಕಲಬುರಗಿ ನಗರದ ಏಶಿಯನ್ ಮಾಲ್ನ ಮೊದಲನೇ ಮಹಡಿಯ ಬಟ್ಟೆ ಅಂಗಡಿಗೆ ದಾಳಿ ಮಾಡಿ ಅಲ್ಲಿ 10 ಮತ್ತು 12 ನೇ ತರಗತಿ, ಡಿಪ್ಲೋಮಾ, ಐಟಿಐ, ಬಿಇ ಹಾಗೂ ಬಿಟೆಕ್ ಪದವಿಯ ನಕಲಿ ಅಂಕಪಟ್ಟಿಗಳನ್ನು ವಿತರಿಸುತ್ತಿದ್ದ ಮುಹಮ್ಮದ್ ಖಾನ್ ಎನ್ನುವ ವ್ಯಕ್ತಿಯನ್ನು ದಸ್ತಗಿರಿ ಮಾಡಿ ಅವನ ಬಳಿ ಇದ್ದ ಲ್ಯಾಪ್ಟಾಪ್, ನಗದು ಹಣ ಮತ್ತು ನಕಲಿ ಅಂಕಪಟ್ಟಿಗಳನ್ನು ಜಪ್ತಿ ಮಾಡಿದ್ದರು.
ಮುಹಮ್ಮದ್ ಖಾನ್ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ರೂವಾರಿಯಾದ ದೆಹಲಿ ಮೂಲದ ರಾಜೀವ್ ಸಿಂಗ್ ಆರೋರಾ ಎನ್ನುವ ವ್ಯಕ್ತಿಯನ್ನು 2025ರ ಫೆ.18 ರಂದು ದೆಹಲಿಯಲ್ಲಿ ವಶಕ್ಕೆ ಪಡೆದು, ಆತನ ವಶದಲ್ಲಿದ್ದ ಭಾರತದ ವಿವಿಧ ರಾಜ್ಯಗಳ 28 ವಿಶ್ವವಿದ್ಯಾಲಯಗಳಿಗೆ ಸೇರಿದ 17 ವಿವಿಧ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿರುವ 122 ಶೀಲುಗಳು, 522 ನಕಲಿ ಅಂಕಪಟ್ಟಿಗಳು ಮತ್ತು ವಿವಿಧ ಗುರುತಿನ ಚೀಟಿಗಳನ್ನು ಮತ್ತು 3,29,500 ರೂ. ನಕಲಿ ಅಂಕಪಟ್ಟಿಗೆ ಸಂಬಂಧಿಸಿದ ಹಣ ಮತ್ತು ನಕಲಿ ಅಂಕಪಟ್ಟಿ ತಯಾರಿಸಲು ಬಳಸುವ ತಾಂತ್ರಿಕ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದರು.
ಆರೋಪಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ದೆಹಲಿ ಮುಂತಾದ ಕಡೆ ಮಧ್ಯವರ್ತಿಗಳನ್ನು ಇಟ್ಟುಕೊಂಡು ಅವರಿಂದ ಹಣ ಪಡೆದು ನಕಲಿ ಅಂಕಪಟ್ಟಿಯನ್ನು ವಿತರಿಸುವ ಮೂಲಕ ಸರ್ಕಾರಕ್ಕೆ, ಸಾರ್ವಜನಿಕರಿಗೆ ಮೋಸ ಮಾಡಿದ್ದು ನಿನಿಖೆಯಿಂದ ತಿಳಿದುಬಂದಿರುವುದರಿಂದ ಆರೋಪಿ ರಾಜೀವ ಸಿಂಗ್ ಆರೋರಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ ಕರೋಶಿ ಅವರು ತಿರಸ್ಕರಿಸಿದ್ದಾರೆ.
ರಾಜ್ಯ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹಯ್ಯಾಳಪ್ಪ ಎನ್. ಬಳಬಟ್ಟಿ ಅವರು ವಾದ ಮಂಡಿಸಿದ್ದರು.