ಕಲಬುರಗಿ | ಜಿಲ್ಲಾ ಕಸಾಪದಿಂದ ಎಪ್ರಿಲ್ ಮಾಸಾಂತ್ಯಕ್ಕೆ `ಬಸವ ಉತ್ಸವ-2025’ : ವಿಜಯಕುಮಾರ ತೇಗಲತಿಪ್ಪಿ

ಕಲಬುರಗಿ : ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಅರಿವಿನ ಕಿರಣ ಬೀರಿದ ವಿಶ್ವಗುರು ಬಸವಣ್ಣನವರ ಜಯಂತಿ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಎಪ್ರಿಲ್ ಮಾಸಾಂತ್ಯಕ್ಕೆ ನಗರದ ಕನ್ನಡ ಭವನದಲ್ಲಿ ವಚನ ಸಾಂಸ್ಕೃತಿಕ ಸಂಭ್ರಮದ ಬಸವ ಉತ್ಸವ-2025 ನ್ನು ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ನಡೆಸಿದ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತೇಗಲತಿಪ್ಪಿ, ಹನ್ನೇರಡನೆಯ ಶತಮಾನದ ಬಸವಾದಿ ಶರಣರು ತಮ್ಮ ವಚನಗಳ ಮೂಲಕವೇ ಜ್ಞಾನದ ಬೆಳಕು ಚೆಲ್ಲಿ ಹೊಸ ಚಿಂತನೆಯನ್ನು ಹುಟ್ಟು ಹಾಕಿದ ಬಸವಣ್ಣನವರ ಜಯಂತಿಯನ್ನು ಪರಿಷತ್ತು ಅರ್ಥಪೂರ್ಣವಾಗಿ ಹಾಗೂ ವೈಚಾರಿಕವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಎಳೆಯ ಮನಸ್ಸಿನಲ್ಲಿ ಶರಣ ಸಂಸ್ಕೃತಿ ಬಿತ್ತುವ ಉದ್ದೇಶದಿಂದ ಬಸವ ಉತ್ಸವದಂಗವಾಗಿ ವಚನಾಧಾರಿತ ವಿವಿಧ ಸ್ಪರ್ಧೆಗಳನ್ನು ಸಹ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ: ವಿಜಯಕುಮಾರ ತೇಗಲತಿಪ್ಪಿ – 98865 60869ಗೆ ಸಂಪರ್ಕಿಸಲು ಕೋರಿದೆ.
ಖ್ಯಾತ ಚಿತ್ರಕಲಾವಿದ ಡಾ ರೆಹಮಾನ್ ಪಟೇಲ್ ಅವರ ಸಂಚಾಲಕತ್ವದಲ್ಲಿ ಎರಡು ದಿನಗಳ ಕಾಲ ವಚನಾಧಾರಿತ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಜತೆಗೆ ವಿಧವಾ ತಾಯನ್ದಿಯರಿಗೆ ಉಡಿ ತುಂಬುವ ಪಕ್ಕಾ ವೈಚಾರಿಕ ಕಾರ್ಯಕ್ರಮ ಆಯೋಜನೆ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಶರಣ ದಂಪತಿಗಳಿಗೆ ಬಸವ ಗೌರವ ಪುರಸ್ಕಾರವೂ ಸಹ ನಡೆಯಲಿದೆ ಎಂದು ತೇಗಲತಿಪ್ಪಿ ತಿಳಿಸಿದ್ದಾರೆ.
ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಕಲ್ಯಾಣಕುಮಾರ ಶೀಲವಂತ, ಶಕುಂತಲಾ ಪಾಟೀಲ, ಜ್ಯೊತಿ ಕೋಟನೂರ, ರವೀಂದ್ರಕುಮಾರ ಭಂಟನಳ್ಳಿ, ಬಾಬುರಾವ ಪಾಟೀಲ ಚಿತ್ತಕೋಟಾ, ಗಣೇಶ ಚಿನ್ನಾಕಾರ, ಸೈಯದ್ ನಜಿರುದ್ದೀನ್ ಮುತ್ತವಲಿ, ಎಂ.ಎನ್. ಸುಗಂಧಿ, ಶಿವಾನಂದ ಪೂಜಾರಿ, ಡಾ. ರೆಹಮಾನ್ ಪಟೇಲ್, ಸಂದೀಪ ಭರಣಿ, ಸುನೀಲ ಇಟಗಿ, ರಮೇಶ ಡಿ ಬಡಿಗೇರ, ಧರ್ಮರಾಜ ಜವಳಿ, ದಿನೇಶ ಮದಕರಿ, ಪ್ರಭುಲಿಂಗ ಮೂಲಗೆ, ರವಿಕುಮಾರ ಶಹಾಪುರಕರ್, ಸಿದ್ಧಲಿಂಗ ಜಿ ಬಾಳಿ, ಹಣಮಂತ ಪ್ರಭು, ವಿನೋದಕುಮಾರ ಜೆ.ಎಸ್., ಸೋಮಶೇಖರಯ್ಯ ಹೊಸಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.